ಚೆನ್ನೈ, ಜೂನ್ 6 : ಮಧುರೈನ ಸೆಲೂನ್ ಮಾಲೀಕರಾದ ಸಿ. ಮೋಹನ್ ಅವರ ಹದಿಮೂರು ವರ್ಷದ ಪುತ್ರಿ ಎಂ. ನೇತ್ರಾ ಅವರನ್ನು ಯುನೈಟೆಡ್ ನೇಷನ್ಸ್ ಅಸೋಸಿಯೇಶನ್ ಫಾರ್ ಡೆವಲಪ್ಮೆಂಟ್ ಅಂಡ್ ಪೀಸ್ (ಯುಎನ್ಎಡಿಎಪಿ) ಗಾಗಿ ‘ವಿಶ್ವಸಂಸ್ಥೆಯ ಸದ್ಭಾವನಾ ರಾಯಭಾರಿ’ ಆಗಿ ನೇಮಿಸಲಾಗಿದೆ.
“ಈ ಸುದ್ದಿ ಕೇಳಿ ನಾವು ನಿಜವಾಗಿಯೂ ಸಂತೋಷದಲ್ಲಿ ಮುಳುಗಿದ್ದೇವೆ” ಎಂದು ಮೋಹನ್ ತಿಳಿಸಿದರು. ಅವರು ತಮಿಳುನಾಡಿನ ದೇವಾಲಯ ಪಟ್ಟಣ ಮಧುರೈನಲ್ಲಿ ಸೆಲೂನ್ ಹೊಂದಿದ್ದು, ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಗುರಿಯಾಗಿದ್ದ 600 ಕುಟುಂಬಗಳಿಗೆ ದಿನಸಿ ಹಂಚಲು ತಮ್ಮ ಪುತ್ರಿಗಾಗಿ ಕೂಡಿಟ್ಟಿದ್ದ 5 ಲಕ್ಷ ರೂ. ಉಳಿತಾಯ ಹಣವನ್ನು ಬಳಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕೀ ಬಾತ್ ರೇಡಿಯೋ
ಕಾರ್ಯಕ್ರಮದಲ್ಲಿ ಈ ವಿಚಾರವನ್ನು ನೆನಪಿಸಿಕೊಂಡಿದ್ದರು.
ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಗುರಿಯಾಗಿದ್ದವರ ನೆರವಿಗೆ ಬಂದಿದ್ದ ಕಾರಣಕ್ಕೆ ನೇತ್ರಾ ಅವರನ್ನು ವಿಶ್ವಸಂಸ್ಥೆಯ ವಿಭಾಗವಾದ ‘ಶಾಂತಿ ಹಾಗೂ ಅಭಿವೃದ್ಧಿ ಕುರಿತಾದ ವಿಸ್ವಸಂಸ್ಥೆ ಅಸೋಸಿಯೇಷನ್’ ಗುರುತಿಸಿ ಆಯ್ಕೆ ಮಾಡಿದೆ. ಮೋಹನ್ ಅವರ ಪುತ್ರಿ ಎಂ. ನೇತ್ರಾ ಅವರು ಶಾಂತಿ ಹಾಗೂ ಅಭಿವೃದ್ಧಿ ಕುರಿತಾದ ವಿಸ್ವಸಂಸ್ಥೆ ಅಸೋಸಿಯೇಷನ್ ಗೆ ಆಯ್ಕೆಯಾಗುವ ಜೊತೆಗೆ ವಿಶ್ವಸಂಸ್ಥೆ ನ್ಯೂಯಾರ್ಕ್ ಹಾಗೂ ಜಿನೇವಾದಲ್ಲಿ ನಡೆಸಲಿರುವ ಸಮ್ಮೇಳನದಲ್ಲಿ ವಿಶ್ವನಾಯಕರ ಮುಂದೆ ಭಾಷಣ ಮಾಡುವ ಅವಕಾಶವನ್ನೂ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಅವರಿಗೆ 1 ಲಕ್ಷ ರೂಪಾಯಿ ಶಿಷ್ಯವೇತನ ಸಿಗಲಿದೆ.








