ಮೆಕ್ಗ್ರಾಥ್ಗಿಂತ ನಮ್ಮ ಜಾವಗಲ್ ಶ್ರೀನಾಥ್ ಭಾಯ್ ಬೌಲಿಂಗ್ ಏನು ಕಮ್ಮಿ ಇರಲಿಲ್ಲ….!
ಕಳೆದ ಮೂರು ದಶಕಗಳಲ್ಲಿ ವಿಶ್ವ ಕ್ರಿಕೆಟ್ನ ಬೌಲಿಂಗ್ ಬಗ್ಗೆ ಮಾತನಾಡುವಾಗ ಗ್ಲೇನ್ ಮೆಕ್ಗ್ರಾಥ್ ಹೆಸರು ಮೊದಲು ಕೇಳಿಬರುತ್ತದೆ. ಆಸೀಸ್ನ ಮಾಜಿ ವೇಗಿ ಗ್ಲೇನ್ ಮೆಕ್ಗ್ರಾಥ್ ಅದ್ಭುತ ಬೌಲರ್. ಅವರ ಬೌಲಿಂಗ್ ಶೈಲಿ ಹಾಗೂ ತಾಂತ್ರಿಕತೆಯ ಬಗ್ಗೆ ಮಾತನಾಡುವ ಹಾಗಿಲ್ಲ. ಹೀಗಾಗಿ ಕೆಲವೊಂದು ಬಾರಿ ನಮ್ಮವರು ಕೂಡ ಅದೇ ರೀತಿ ಬೌಲಿಂಗ್ ಮಾಡುತ್ತಿದ್ರೂ ಅವರ ಹೆಸರೇ ನೆನಪು ಆಗಲ್ಲ.
ಇದೀಗ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ಆಗಿರುವ ಪಾರ್ಥಿವ್ ಪಟೇಲ್ ಬೌಲರ್ಗಳ ಬಗ್ಗೆ ಮಾತನಾಡಿದ್ದಾರೆ. ಅದು ಕೂಡ ಭಾರತದ ಬೌಲರ್ಗಳ ಬಗ್ಗೆ. ಜನ ಯಾವಾಗಲೂ ಮೆಕ್ ಗ್ರಾಥ್ ಬೌಲಿಂಗ್ ಮಾತನಾಡುತ್ತಾರೆ. ಆದ್ರೆ ಮೆಕ್ ಗ್ರಾಥ್ ಶೈಲಿಯಲ್ಲೇ ನಮ್ಮವರು ಬೌಲಿಂಗ್ ಮಾಡುತ್ತಿದ್ದರು. ಅದು ಬೇರೆ ಯಾರು ಅಲ್ಲ. ಜಾವಗಲ್ ಎಕ್ಸ್ ಪ್ರೆಸ್ ಖ್ಯಾತಿಯ ಜಾವಗಲ್ ಶ್ರೀನಾಥ್. ಮೆಕ್ಗ್ರಾಥ್ ಬೌಲಿಂಗ್ನಂತೆ ಜಾವಗಲ್ ಶ್ರೀನಾಥ್ ಅವರ ಬೌಲಿಂಗ್ ಕೂಡ ಕಮ್ಮಿ ಏನು ಇಲ್ಲ ಅಂತ ಪಾರ್ಥಿವ್ ಪಟೇಲ್ ಹೇಳಿದ್ದಾರೆ.
ವೇಗ, ನಿಖರತೆ ಹಾಗೂ ಬೌನ್ಸಿ ಎಸೆತಗಳನ್ನು ಹಾಕುತ್ತಿದ್ದ ಶ್ರೀನಾಥ್ ಅವರ ಬೌಲಿಂಗ್ ನಲ್ಲಿ ವಿಕೆಟ್ ಕೀಪಿಂಗ್ ಮಾಡುವುದು
ಸವಾಲಿನ ಕೆಲಸವಾಗಿತ್ತು ಎಂದು ಪಾರ್ಥಿವ್ ಪಟೇಲ್ ಹೇಳಿದ್ದಾರೆ. ಪಾರ್ಥಿವ್ ಪಟೇಲ್ ತನ್ನ 17ನೇ ವಯಸ್ಸಿನಲ್ಲಿ ಟೀಮ್ ಇಂಡಿಯಾಗೆ ಆಡಿದ್ದರು. ಅತೀ ಕಿರಿಯ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದ ಪಾರ್ಥಿವ್ ಎಷ್ಟು ಬೇಗ ಟೀಮ್ ಇಂಡಿಯಾಗೆ ಬಂದ್ರೋ ಅಷ್ಟೇ ಬೇಗ ಟೀಮ್ ಇಂಡಿಯಾದಿಂದ ದೂರವಾದ್ರು. ಅದ್ರಲ್ಲೂ ಧೋನಿ ಟೀಮ್ ಇಂಡಿಯಾಗೆ ಎಂಟ್ರಿಕೊಟ್ಟ ನಂತರ ಪಾರ್ಥಿವ್ ಪಟೇಲ್ಗೆ ಅವಕಾಶವೇ ಸಿಗಲಿಲ್ಲ.
ಸದ್ಯ ಜಸ್ಪ್ರಿತ್ ಬೂಮ್ರಾ, ಮಹಮ್ಮದ್ ಶಮಿ ಹಾಗೂ ಇಶಾಂತ್ ಶರ್ಮಾ ಅವರನ್ನೊಳಗೊಂಡ ಟೀಮ್ ಇಂಡಿಯಾದ ವೇಗದ ಬೌಲಿಂಗ್ ವಿಭಾಗ ವಿಶ್ವ ಕ್ರಿಕೆಟ್ನ ಶ್ರೇಷ್ಠರ ಸಾಲಿನಲ್ಲಿ ನಿಂತಿದೆ. ಆದ್ರೆ ಈ ಹಿಂದೆ ಭಾರತ ತಂಡದ ವೇಗದ ಬೌಲಿಂಗ್ ವಿಭಾಗ ಒಬ್ಬರ ಮೇಲೆ ಅವಲಂಬಿತವಾಗಿತ್ತು. ಭಾರತ ವಿಶ್ವ ಕ್ರಿಕೆಟ್ ನಲ್ಲಿ ಶ್ರೇಷ್ಠ ಬ್ಯಾಟ್ಸ್ ಮೆನ್ ಹಾಗೂ ಶ್ರೇಷ್ಠ ಸ್ಪಿನ್ನರ್ಗಳನ್ನು ಕೊಡುಗೆಯಾಗಿ ನೀಡಿದೆ. ಆದ್ರೆ ವೇಗದ ಬೌಲಿಂಗ್ ನಲ್ಲಿ ಅಷ್ಟಕ್ಕಷ್ಟೇ. 80ರ ದಶಕದಲ್ಲಿ ಕಪಿಲ್ ದೇವ್, 90ರ ದಶಕದಲ್ಲಿ ಜಾವಗಲ್ ಶ್ರೀನಾಥ್ ಹಾಗೂ 2000ದಲ್ಲಿ ಜಹೀರ್ ಖಾನ್ ಟೀಮ್ ಇಂಡಿಯಾದ ವೇಗದ ಬೌಲಿಂಗ್ ಅಸ್ತ್ರವಾಗಿದ್ದರು. ಈ ಪೈಕಿ ಪಾರ್ಥಿವ್ ಪಟೇಲ್ ಕಪಿಲ್ ದೇವ್ ಬಿಟ್ಟು ಶ್ರೀನಾಥ್ ಮತ್ತು ಜಹೀರ್ ಖಾನ್ ಜೊತೆಗೆ ಆಡಿದ್ದಾರೆ.
2002ರಲ್ಲಿ ಕೊಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ಶ್ರೀನಾಥ್ ಅವರು ತನ್ನ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಆ ಪಂದ್ಯದಲ್ಲಿ ಪಾರ್ಥಿವ್ ಪಟೇಲ್ ಕೂಡ ಇದ್ದರು. ತನ್ನ ಕಟ್ಟ ಕಡೆಯ ಪಂದ್ಯದಲ್ಲೂ ಶ್ರೀನಾಥ್ ತನ್ನ ಬೌಲಿಂಗ್ ಮೊನಚನ್ನು ಕಳೆದುಕೊಂಡಿರಲಿಲ್ಲ. ವೇಗ, ನಿಖರತೆ ಹಾಗೂ ಬೌನ್ಸ್ ಅವರ ಎಸೆತಗಳಲ್ಲಿ ಕಾಣಬಹುದಿತ್ತು ಅಂತ ಪಾರ್ಥಿವ್ ಪಟೇಲ್ ನೆನಪು ಮಾಡಿಕೊಂಡಿದ್ದಾರೆ.
ಜಾವಗಲ್ ಶ್ರೀನಾಥ್ 2003ರ ವಿಶ್ವಕಪ್ ಫೈನಲ್ ನಂತರ ತನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು. ಶ್ರೀನಾಥ್ 67 ಟೆಸ್ಟ್ ಪಂದ್ಯಗಳಲ್ಲಿ 236 ವಿಕೆಟ್ ಹಾಗೂ 229 ಏಕದಿನ ಪಂದ್ಯಗಳಲ್ಲಿ 315 ವಿಕೆಟ್ ಕಬಳಿಸಿದ್ದರು.
ಇನ್ನು ಪಾರ್ಥಿವ್ ಪಟೇಲ್ ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಅವರ ಬೌಲಿಂಗ್ ಬಗ್ಗೆಯೂ ಮಾತನಾಡಿದ್ದಾರೆ. ಅನಿಲ್ ಭಾಯ್ ಮತ್ತು ಹರ್ಭಜನ್ ಸಿಂಗ್ ಆಗ ಯಶಸ್ಸಿನ ಉತ್ತುಂಗದಲ್ಲಿದ್ದರು. ಇವರಿಬ್ಬರ ಬೌಲಿಂಗ್ನಲ್ಲೂ ಕೀಪಿಂಗ್ ಮಾಡೋದು ದೊಡ್ಡ ಸವಾಲಾಗಿತ್ತು. ಯಾಕಂದ್ರೆ ಅವರಿಬ್ಬರು ಮಮೂಲಿ ಸ್ಪಿನ್ನರ್ಗಳಿಗಿಂತ ವೇಗವಾಗಿ ಚೆಂಡನ್ನು ಸ್ಪಿನ್ ಮಾಡಿ ಎಸೆಯುತ್ತಿದ್ದರು. ಕೆಲವೊಂದು ಬಾರಿ ಚೆಂಡು ಬೌನ್ಸ್ ಆಗುತ್ತಿತ್ತು. ಹೀಗೆ ಪ್ರತಿಯೊಬ್ಬರ ಬೌಲಿಂಗ್ ನೋಡಿಕೊಂಡು ನಾನು ನನ್ನ ವಿಕೆಟ್ ಕೀಪಿಂಗ್ ಕೌಶಲ್ಯಗಳನ್ನು ಕಲಿತುಕೊಳ್ಳುತ್ತಿದೆ ಅಂತ ಪಾರ್ಥಿವ್ ಪಟೇಲ್ ಹೇಳಿದ್ದಾರೆ.








