ಲಾಕ್ ಡೌನ್ ಟೈಮ್ ನಲ್ಲಿ ಕೋಟಿ ಕೋಟಿ ಸಂಪಾದನೆ ಮಾಡಿದವರಲ್ಲಿ ವಿರಾಟ್ ಕೊಹ್ಲಿ ಒಬ್ಬರು…!
ಕೊರೋನಾ ವೈರಸ್‍ನಿಂದ ಜನ ಜೀವ ಉಳಿಸಿಕೊಳ್ಳಲು ಒದ್ದಾಡುತ್ತಿದ್ದಾರೆ. ಹೆಮ್ಮಾರಿಯಂತೆ ಜಗವನ್ನೇ ಆವರಿಸಿರುವ ಕೊರೋನಾ ವೈರಸ್ ಮಾಡಿರುವಂತಹ ನಷ್ಟ ಅಷ್ಟಿಷ್ಟಲ್ಲ. ಆರ್ಥಿಕವಾಗಿ ಸಾಕಷ್ಟು ಹೊಡೆತವನ್ನು ನೀಡಿರುವ ಈ ವೈರಸ್‍ನಿಂದಾಗಿ ಜನ ದುಡ್ಡಿಲ್ಲದೆ ಪರದಾಡುತ್ತಿದ್ದಾರೆ. ಉದ್ಯೋಗ ಕಡಿತ ಸೇರಿದಂತೆ ಯಾವುದೇ ಚಟುವಟಿಕೆಗಳು ಕೂಡ ಸರಾಗವಾಗಿ ನಡೆಯುತ್ತಿಲ್ಲ. ಹೀಗಾಗಿ ಜನ ಮುಂದೇನು ಅಂತ ಯೋಚನೆ ಪಡುತ್ತಿದ್ದಾರೆ.
ಆದ್ರೆ ಸೆಲೆಬ್ರಿಟಿಗಳು, ಕ್ರಿಕೆಟಿಗರು, ಸಿನಿತಾರೆಯರು ಹಾಗಲ್ಲ. ಕೊರೋನಾ ವೈರಸ್‍ನಿಂದಾಗಿ ಅವರು ಮನೆಯಲ್ಲೇ ಇದ್ದಾರೆ. ಆದ್ರೆ ಅವರು ಮನೆಯಲ್ಲಿದ್ದುಕೊಂಡೇ ದುಡ್ಡು ಸಂಪಾದನೆ ಮಾಡುತ್ತಿದ್ದಾರೆ. ಇದ್ರಲ್ಲಿ ಅಚ್ಚರಿಪಡುವಂತಹುದ್ದೇನೂ ಇಲ್ಲ. ಯಾಕಂದ್ರೆ ಸಾಮಾಜಿಕ ಜಾಲ ತಾಣದಲ್ಲಿ ಅವರು ಹಾಕಿರುವ ಒಂದೊಂದು ಪೋಸ್ಟ್‍ಗೂ ಇಂತಿಷ್ಟು ಅಂತ ಹಣ ಬರುತ್ತಿದೆ. ಹೀಗಾಗಿ ಸೆಲೆಬ್ರಿಟಿಗಳ ಬದುಕಿಗೆ ಬೇಕಾದಷ್ಟು ದುಡ್ಡು ಬರುತ್ತಾ ಇದೆ.
ನೀವು ನಂಬುತ್ತೀರೋ ಇಲ್ವೋ… ಕೇವಲ ಇನ್‍ಸ್ಟಾಗ್ರಾಮ್ ಅನ್ನೋ ಸಾಮಾಜಿಕ ಜಾಲ ತಾಣದಲ್ಲಿ ಕೋಟಿ ಕೋಟಿ ಹಣ ಸಂಪಾದಿಸಿವರಿದ್ದಾರೆ. ಅದ್ರಲ್ಲೂ ಕ್ರೀಡಾಪಟುಗಳು. ಜಗತ್ತಿನ ನಾನಾ ಕ್ರೀಡೆಗಳ ಕ್ರೀಡಾಪಟುಗಳಿಗೆ ಲಕ್ಷಾಂತರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಅವರು ಮನೆಯಲ್ಲಿ ಸುಮ್ಮನೆ ತಮಾಷೆ ಮಾಡಿಕೊಂಡು, ಹಳೆಯ ನೆನಪುಗಳನ್ನು ನೆನಪಿಸಿಕೊಂಡು, ಅಡುಗೆ ಮಾಡಿಕೊಂಡು, ಜಿಮ್ ನಲ್ಲಿ ಕಸರತ್ತು ಮಾಡಿಕೊಂಡಿರುವಂತಹ ಫೋಟೋ ಅಥವಾ ವಿಡಿಯೋ ಒಂದರಲ್ಲಿ ಇಷ್ಟೊಂದು ಮೊತ್ತದ ಹಣವನ್ನು ಗಳಿಸುತ್ತಿದ್ದಾರೆ.
ಅದ್ರಲ್ಲಿ ನಮ್ಮ ದೇಶದ ಕ್ರೀಡಾಪಟುಗಳು ಇದ್ದಾರೆ. ಮುಖ್ಯವಾಗಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ. ಲಾಕ್‍ಡೌನ್ ಟೈಮ್ ನಲ್ಲಿ ತನ್ನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಗರಿಷ್ಠ ಹಣ ಸಂಪಾದನೆ ಮಾಡಿದ್ದವರ ಸಾಲಿನಲ್ಲಿ ವಿರಾಟ್‍ಗೆ ಆರನೇ ಸ್ಥಾನಮಾನವಿದೆ. ಮಾರ್ಚ್ 12ರಿಂದ ಮೇ 14ರವರೆಗೆ ವಿರಾಟ್ ಕೊಹ್ಲಿ ಒಟ್ಟು ಗಳಿಸಿದ್ದು ಬರೋಬ್ಬರಿ 3,79,294 ಪೌಂಡ್. ಅಂದ್ರೆ ಅವರ ಸರಾಸರಿ ಒಂದು ಪೋಸ್ಟ್‍ಗೆ 1,26,431 ಪೌಂಡ್. ಅಂದ ಮೇಲೆ ಒಂದು ಸಲ ಊಹಿಸಿಕೊಳ್ಳಿ ಎಷ್ಟಾಗಿದೆ ಅಂತ.
ಇನ್ನು ಈ ಲಿಸ್ಟ್ ನಲ್ಲಿ ನಂಬರ್ ವನ್ ಸ್ಥಾನ ಪಡೆದುಕೊಂಡವರು ಪೋರ್ಚ್‍ಗಲ್‍ನ ಸೂಪರ್ ಸ್ಟಾರ್ ಫುಟ್‍ಬಾಲ್ ಆಟಗಾರ ಕ್ರಿಸ್ಟಿಯಾನೋ ರೋನಾಲ್ಡೊ. ರೋನಾಲ್ಡೋ ಗಳಿಸಿದ್ದು “ಕೇವಲ”1.8 ಮಿಲಿಯನ್ ಪೌಂಡ್. ಹಾಗೇ ಅರ್ಜೆಂಟಿನಾದ ಫುಟ್‍ಬಾಲ್ ಹೀರೋ ಲಿಯೋನಲ್ ಮೆಸ್ಸಿ ಗಳಿಸಿದ್ದು 1.2 ಮಿಲಿಯನ್ ಪೌಂಡ್. ಮತ್ತೊಂದೆಡೆ ಬ್ರೇಜಿಲ್ ಫುಟ್‍ಬಾಲ್ ತಾರೆ ನೈಮರ್ ಗಳಿಸಿದ್ದು ಕೂಡ 1.1 ಮಿಲಿಯನ್ ಪೌಂಡ್.
ಇನ್ನುಳಿದಂತೆ, ಬಾಸ್ಕೆಟ್‍ಬಾಲ್ ಆಟಗಾರ ಶಕ್ವೇಲ್ ಒ ನೀಲ್ 583628 ಪೌಂಡ್, ಇಂಗ್ಲೆಂಡ್‍ನ ಮಾಜಿ ಫುಟ್‍ಬಾಲ್ ಆಟಗಾರ ಗಳಿಸಿದ್ದು 405359 ಪೌಂಡ್. ಒಟ್ಟಿನಲ್ಲಿ ಕ್ರೀಡಾಪಟುಗಳಿಗೆ ಪಂದ್ಯಗಳು ಇಲ್ಲದಿದ್ರೂ ಮನೆಯಲ್ಲೇ ಕುಳಿತುಕೊಂಡು ಕೋಟಿ ಕೋಟಿ ಹಣವನ್ನು ಸಂಪಾದಿಸಿದ್ದಾರೆ.








