2020ರ ಐಪಿಎಲ್ ಆತಿಥ್ಯ ವಹಿಸಲು ಯುಎಇ, ಶ್ರೀಲಂಕಾ ಪೈಪೋಟಿ
ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯ ಭವಿಷ್ಯ ಜೂನ್ 10 ರಂದು ನಿರ್ಧಾರವಾಗಲಿದೆ. ಅಂದು ಐಸಿಸಿಯು ಮಹತ್ವದ ಸಭೆ ನಡೆಸಿ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಸಂಘಟಿಸಬೇಕೋ ಅಥವಾ ಮುಂದೂಡಬೇಕೋ ಎಂಬುದನ್ನು ತಿಳಿಸಲಿದೆ. ಈ ಐಸಿಸಿಯ ಈ ನಿರ್ಧಾರ ಮೇಲೆ ಭಾರತದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಅವಲಂಬಿತವಾಗಿದೆ.
ಈಗಾಗಲೇ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ ಮುಂದೂಡಿದ್ರೆ ಅದೇ ವೇಳೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಆಯೋಜಿಸುವ ಲೆಕ್ಕಚಾರ ಬಿಸಿಸಿಐ ನಡೆಸುತ್ತಿದೆ. ಆದ್ರೆ ಕೊರೋನಾ ವೈರಸ್ ನ ಹಾವಳಿ ಯಾವ ಪರಿಸ್ಥಿತಿಯನ್ನು ತಂದು ಒಡ್ಟುತ್ತದೆ ಎಂಬುದನ್ನು ಈಗಲೇ ಹೇಳೋಕೆ ಆಗಲ್ಲ. ಸದ್ಯ ಸ್ಥಿತಿಯಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಆದ್ರೆ ಇನ್ನೂ ಮೂರು ನಾಲ್ಕು ತಿಂಗಳುಗಳು ಇರುವುದರಿಂದ ಐಪಿಎಲ್ ಟೂರ್ನಿಯನ್ನು ಸಂಘಟಿಸಲು ಕೊರೋನಾ
ಸೋಂಕು ಅಡ್ಡಿಯನ್ನುಂಟು ಮಾಡುವುದಿಲ್ಲ ಎಂಬ ನಂಬಿಕೆಯೂ ಇದೆ.
ಇದೆಲ್ಲಾದರ ಮಧ್ಯ ಬಿಸಿಸಿಐ ಭಾರತದಿಂದ ಹೊರಗಡೆ ಯಾವುದಾದ್ರೂ ಒಂದು ದೇಶದಲ್ಲಿ ಟೂರ್ನಿಯನ್ನು ನಡೆಸುವ ಪ್ಲಾನ್ ಕೂಡ ಇದ್ರೂ ಇರಬಹುದು. ಒಂದು ವೇಳೆ ಐಪಿಎಲ್ ಟೂರ್ನಿಯನ್ನು ತಟಸ್ಥ ತಾಣದಲ್ಲಿ ಸಂಘಟಿಸುವುದಾದ್ರೆ ಆತಿಥ್ಯ ವಹಿಸಲು ಯುನೈಟೆಡ್ ಅರಬ್ ಎಮಿರೇಟ್ಸ್ ಆಸಕ್ತಿಯನ್ನು ಹೊಂದಿದೆ. ಈಗಾಗಲೇ ಯುನೈಟೆಡ್ ಅರಬ್ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯು ಈ ಬಗ್ಗೆ ಪ್ರಸ್ತಾಪವನ್ನು ಮಾಡಿದೆ.
ಯುಎಇ ಕ್ರಿಕೆಟ್ ಮಂಡಳಿಯು ಬಿಸಿಸಿಐ ಬಳಿ ಆತಿಥ್ಯ ವಹಿಸುವುದರ ಬಗ್ಗೆ ಪ್ರಸ್ತಾವಣೆ ಮಾಡಲಾಗಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ. ಈ ಹಿಂದೆಯೂ ಯುಎಇ ಐಪಿಎಲ್ ಟೂರ್ನಿಗೆ ಆತಿಥ್ಯ ವಹಿಸಿತ್ತು. ಅದು ಅಲ್ಲದೆ ತಟಸ್ಥ ತಾಣವಾಗಿ ಹಲವಾರು ದ್ವಿಪಕ್ಷೀಯ ಸರಣಿಗಳಿಗೂ ಆತಿಥ್ಯ ವಹಿಸಿದೆ. ನಮ್ಮಲ್ಲಿ ಅತ್ಯಾಧುನಿಕ ಮಾದರಿಯ ಎಲ್ಲಾ ಸೌಲಭ್ಯಗಳು ಇವೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮುಬಾಶೀರ್ ಉಸ್ಮಾನಿ ಹೇಳಿದ್ದಾರೆ.
ಮತ್ತೊಂದೆಡೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯೂ ಐಪಿಎಲ್ ಆತಿಥ್ಯ ವಹಿಸಲು ಮುಂದೆ ಬಂದಿದೆ. ಒಂದು ವೇಳೆ ಭಾರತ ಐಪಿಎಲ್ ಟೂರ್ನಿಯನ್ನು ಬೇರೆ ಕಡೆ ಶಿಫ್ಟ್ ಮಾಡಿದ್ರೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ತಮ್ಮ ದೇಶದಲ್ಲಿ ಐಪಿಎಲ್ ಟೂರ್ನಿ ನಡೆಸಲು ಆಸಕ್ತಿ ಹೊಂದಿದೆಯಂತೆ.
ಒಟ್ಟಿನಲ್ಲಿ ಭಾರತದ ಪ್ರತಿ ದೇಸಿ ಕ್ರಿಕೆಟ್ ಟೂರ್ನಿಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ಅದು ಎಷ್ಟರ ಮಟ್ಟಿಗೆ ಅಂದ್ರೆ ಟಿ-ಟ್ವೆಂಟಿ ವಿಶ್ವಕಪ್‍ಗಿಂತಲೂ ಹೆಚ್ಚು. ಅಂದ ಮೇಲೆ ಊಹಿಸಿಕೊಳ್ಳಿ ಐಪಿಎಲ್ ನಲ್ಲಿ ಹಣ ಯಾವ ರೀತಿ ಹರಿದು ಬರುತ್ತಿದೆ ಎಂಬುದು. ಒಟ್ಟಾರೆ ಐಪಿಎಲ್ ಭವಿಷ್ಯ ಮಾತ್ರ ನಿಂತಿರೋದು ಟಿ-ಟ್ವೆಂಟಿ ವಿಶ್ವಕಪ್ ಮೇಲೆ.








