ಹೈದರಾಬಾದ್, ಜೂನ್ 8: ಕೊರೋನಾ ಸೋಂಕಿಗೆ ಹೈದರಾಬಾದ್ ನ ಸುದ್ದಿವಾಹಿನಿ ಪತ್ರಕರ್ತ ಬಲಿಯಾಗಿದ್ದಾರೆ. ತೆಲುಗಿನ ಟಿವಿ 5 ಸುದ್ದಿವಾಹಿನಿಯ ಪತ್ರಕರ್ತ ಮನೋಜ್ ಕುಮಾರ್ ಅವರು ಕೊರೋನಾಗೆ ಬಲಿಯಾದವರು. ಪತ್ರಕರ್ತ ಮನೋಜ್ ಕುಮಾರ್ ಅವರನ್ನು ಕೊರೊನಾ ಸೋಂಕಿನ ಶಂಕೆಯ ಹಿನ್ನೆಲೆಯಲ್ಲಿ ಹೈದರಾಬಾದ್ ನ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಿನ್ನೆ ಅವರ ಗಂಟಲು ದ್ರವ ಮಾದರಿಯ ಪರೀಕ್ಷಾ ವರದಿ ಬಂದಿದ್ದು, ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆದರೆ ಇಂದು ಅವರು ಮೃತಪಟ್ಟಿದ್ದು, ಹೈದರಾಬಾದ್ ಗಾಂಧಿ ಆಸ್ಪತ್ರೆಯ ವೈದ್ಯರು ಮನೋಜ್ ಕುಮಾರ್ ಬೆಲ್ಯಾಟರಲ್ ನ್ಯುಮೋನಿಯಾ ಮತ್ತು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ವರದಿಗಳ ಪ್ರಕಾರ ಮನೋಜ್ ಕುಮಾರ್ ಕೇವಲ ಎಂಟು ತಿಂಗಳ ಹಿಂದೆ ವಿವಾಹವಾಗಿದ್ದರು. ಇತ್ತೀಚೆಗಷ್ಟೇ ಅವರ ಅಣ್ಣ ಮತ್ತು ಅತ್ತಿಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಅಣ್ಣನ ಮಗನನ್ನು ತಾವೇ ಸಾಕುತ್ತಿದ್ದ ಮನೋಜ್ ಕುಮಾರ್ ತಮಗೆ ಮಗು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದರು.