ವಾಸೀಮ್ ಅಕ್ರಮ್ ಪ್ರತಿಕಾರಕ್ಕೆ ಹೆದರಿದ್ದ ಆಲನ್ ಡೋನಾಲ್ಡ್ ಬ್ಯಾಟಿಂಗ್ ಗೆ ಬರಲಿಲ್ಲ…!
ಅದು 70ರಿಂದ 90ರ ದಶಕದ ವೇಳೆ.. ವೇಗದ ಬೌಲರ್ ಗಳು ತಮ್ಮ ಘಾತಕ ಬೌಲಿಂಗ್ ಮೂಲಕವೇ ಬ್ಯಾಟ್ಸ್ ಮೆನ್‍ಗಳಿಗೆ ನಡುಕ ಹುಟ್ಟಿಸುತ್ತಿದ್ದರು. ಆಗ ಬ್ಯಾಟ್ಸ್ ಮೆನ್‍ಗಳಿಗೆ ತಮ್ಮ ದೇಹವನ್ನು ರಕ್ಷಣೆ ಮಾಡಿಕೊಳ್ಳಲು ಈಗಿರುವಂತಹ ಸೌಲಭ್ಯಗಳು ಅಷ್ಟೊಂದು ಇರಲಿಲ್ಲ. ಹೀಗಾಗಿ ಬಹಳ ಎಚ್ಚರಿಕೆಯಿಂದಲೇ ಬ್ಯಾಟ್ಸ್ ಮೆನ್‍ಗಳು ಆಡಬೇಕಾಗಿತ್ತು. ಆದ್ರೂ ಆಗಿನ ಬ್ಯಾಟ್ಸ್‍ಮೆನ್ ಗಳು ಹೆದರದೇ ಬ್ಯಾಟ್ ಬೀಸುತ್ತಿದ್ದರು. ಎಷ್ಟೇ ವೇಗದ ಎಸೆತಗಳಿಗೂ ದಿಟ್ಟ ಉತ್ತರವನ್ನೇ ನೀಡುತ್ತಿದ್ದರು.
ಅಂದ ಹಾಗೇ, ಪಾಕ್‍ನ ವೇಗಿ ಖಾಸಗಿ ಲೈವ್ ಕಾರ್ಯಕ್ರಮವೊಂದರಲ್ಲಿ 1990ರ ದಶಕದಲ್ಲಿ ವೇಗದ ಬೌಲರ್‍ಗಳು ಯಾವ ರೀತಿ ಮೇಲುಗೈ ಸಾಧಿಸುತ್ತಿದ್ದರು ಎಂಬುದುರ ಬಗ್ಗೆ ಮಾತನಾಡಿದ್ದಾರೆ. 90ರಿಂದ ಪಾಕ್ ತಂಡದಲ್ಲಿ ವಾಸೀಮ್ ಅಕ್ರಮ್ ಮತ್ತು ವಕಾರ್ ಯೂನಸ್ ಅವರೇ ಹೆಚ್ಚು ಪಾರಮ್ಯ ವಹಿಸಿದ್ದು. ಆ ನಂತರ ಶೋಯಿಬ್ ಅಖ್ತರ್ ಮುಂಚೂಣಿಗೆ ಬಂದಿದ್ದರು. ಹೀಗೆ ವೇಗದ ಬೌಲರ್‍ಗಳ ಬಗ್ಗೆ ಮಾತನಾಡಿದ್ದ ಅಕ್ರಮ್, ವೆಸ್ಟ್ ಇಂಡೀಸ್ ತಂಡದಲ್ಲಿ ಕಟ್ರ್ಲಿ ಆಂಬ್ರೋಸ್, ಕಟ್ರ್ನಿ ವಾಲ್ಸ್, ಆಸ್ಟ್ರೇಲಿಯಾದ ಮೆಕ್ ಗ್ರಾಥ್, ದಕ್ಷಿಣ ಆಫ್ರಿಕಾದ ಆಲನ್ ಡೋನಾಲ್ಡ್ ಮೊದಲಾದವರು ಅತ್ಯುತ್ತಮ ಮಟ್ಟದಲ್ಲಿ ಬೌಲಿಂಗ್ ಮಾಡುತ್ತಿದ್ದರು. ಇದೇ ವೇಳೆ ಆಲನ್ ಡೋನಾಲ್ಡ್ ಹೆಸರು ಬಂದ ತಕ್ಷಣ ವಾಸೀಮ್ ಅಕ್ರಮ್ ಸುಮಾರು 30 ವರ್ಷಗಳ ಹಿಂದೆ ನಡೆದಿದ್ದ ಘಟನೆಯನ್ನು ಸ್ಮರಿಸಿಕೊಂಡ್ರು.
ಆಲನ್ ಡೋನಾಲ್ಡ್ ಅವರ ವಾಯು ವೇಗದ ಎಸೆತ ತನ್ನ ದವಡೆಗೆ ಬಡಿದು 20 ಹೊಲಿಗೆಗಳನ್ನು ನಾನು ಹಾಕಿಸಿಕೊಳ್ಳಬೇಕಾಯ್ತು ಎಂದು ಹೇಳಿದ್ರು.
ನನ್ನ ದವಡೆಯಲ್ಲಿ 20 ಹೊಲಿಗೆಗಳಿವೆ. ಅದು 1989ನೇ ಇಸವಿ ಇರಬೇಕು. ನಾನು ಆಗ ಇಂಗ್ಲೆಂಡ್ ನಲ್ಲಿ ಕೌಂಟಿ ಪಂದ್ಯವನ್ನು ಆಡುತ್ತಿದೆ. ಲ್ಯಾಂಕ್‍ಶೈರ್ ಪರ ನಾನು ಎಂಟನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದೆ. ಆಗ ನನಗಿನ್ನು ಸರಿ ಸುಮಾರು 20ರಹರೆಯ. ಡೋನಾಲ್ಡ್ ಅವರು 150 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದರು. ಅವರು ಒಂದು ಶಾರ್ಟ್ ಬಾಲ್ ಹಾಕಿದ್ರು. ಅದನ್ನು ನಾನು ಹೊಡೆಯಲು ಮುಂದಾದೆ. ಆಗ ಚೆಂಡು ಬ್ಯಾಟಿನ ಅಂಚಿಗೆ ತಾಗಿ ನನ್ನ ದವಡೆಗೆ ಬಡಿಯಿತ್ತು ಅಷ್ಟೇ. ನಾನು ಸೀದಾ ಆಸ್ಪತ್ರೆಗೆ ಹೋಗಬೇಕಾಯಿತು ಅಂತಾರೆ ವಾಸೀಮ್ ಅಕ್ರಮ್.
ಆಸ್ಪತ್ರೆಗೆ ಹೋಗುವಾಗಲೇ ನಾನು ಪ್ರತಿಕಾರ ತೀರಿಸಿಕೊಳ್ಳಬೇಕು ಅಂತ ಮನಸ್ಸಿನಲ್ಲೇ ಅಂದುಕೊಂಡಿದ್ದೆ. ದಂತ ವೈದ್ಯರು ನನ್ನ
ದವಡೆಯ ಒಳಭಾಗ ಹಾಗೂ ಹೊರಭಾಗದಲ್ಲಿ ತಲಾ 10ರಂತೆ ಸ್ಟಿಚ್ ಮಾಡಿದ್ದರು. ಹಾಗೇ ಕೆಲವು ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದರು. ಆದ್ರೆ ನಾನು ಅವರ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ನಾನು ಮೈದಾನಕ್ಕೆ ಹೋಗಿ ಆಡಬೇಕು ಎಂದು ಹೇಳಿದ್ದೆ. ಸಂಜೆಯ ವೇಳೆ ನಾನು ಮೈದಾನಕ್ಕೆ ಬಂದು ಬೌಲಿಂಗ್ ಮಾಡಿದ್ದೆ. ಅಲ್ಲದೆ ಆ ಪಂದ್ಯವನ್ನು ನಾವು ಗೆದ್ದಿದ್ದೇವು. ಅಚ್ಚರಿಯಂದ್ರೆ ಆ ಪಂದ್ಯದಲ್ಲಿ ಆಲನ್ ಡೋನಾಲ್ಡ್ ಬ್ಯಾಟಿಂಗ್‍ಗೆ ಇಳಿಯಲಿಲ್ಲ. ಅವರು ನಾನು ಪ್ರತಿಕಾರ ತೀರಿಸಿಕೊಳ್ಳುತ್ತೇನೆ ಅಂತ ಹೆದರಿಕೊಂಡಿದ್ದರು ಅಂತ ವಾಸೀಮ್ ಅಕ್ರಮ್ ಹೇಳಿಕೊಂಡಿದ್ದಾರೆ.
ವಾಸೀಮ್ ಅಕ್ರಮ್ ಅವರು ವಿಶ್ವದ ಶ್ರೇಷ್ಠ ಬೌಲರ್‍ಗಳಲ್ಲಿ ಒಬ್ಬರಾಗಿದ್ದಾರೆ. 1992ರ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಾಸೀಮ್ ಅಕ್ರಮ್, 1999ರಲ್ಲಿ ತನ್ನ ನಾಯಕತ್ವದಲ್ಲಿ ಪಾಕ್‍ಗೆ ಎರಡನೇ ಬಾರಿ ವಿಶ್ವಕಪ್ ಗೆಲ್ಲಿಸಿಕೊಡಲು ವಿಫಲರಾಗಿದ್ದರು. ಫೈನಲ್ ನಲ್ಲಿ ಪಾಕಿಸ್ತಾನ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿತ್ತು.








