ಯಾರು, ಯಾರನ್ನೂ ಯಾರ ಜೊತೆಗೆ ಹೋಲಿಕೆ ಮಾಡಬೇಡಿ – ಜಾವೇದ್ ಮಿಯಾಂದಾದ್
ನಿನ್ನೆಯಷ್ಟೇ ಪಾಕಿಸ್ತಾನದ ಮಾಜಿ ನಾಯಕ ಅಮೀರ್ ಸೊಹೈಲ್ ಅವರು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರನ್ನು ಪಾಕಿಸ್ತಾನದ ಮಾಜಿ ನಾಯಕ ಜಾವೇದ್ ಮಿಯಾಂದಾದ್ ಜೊತೆ ಹೋಲಿಕೆ ಮಾಡಿದ್ದರು. ಜಾವೇದ್ ಮಿಯಾಂದಾದ್ ಸಹ ಆಟಗಾರರಿಗೂ ಸ್ಪೂರ್ತಿ ನೀಡುತ್ತಿದ್ದರು. ಅವರಿಂದ ಸಹ ಆಟಗಾರರಿಗೆ ಕಲಿಯಲು ಸಹಾಯವಾಗಿದೆ. ಅದೇ ರೀತಿ ವಿರಾಟ್ ಕೊಹ್ಲಿ ಕೂಡ ಅಂತ ಅಮೀರ್ ಸೊಹೈಲ್ ಹೇಳಿದ್ದರು.
ಆದ್ರೆ ಅಮೀರ್ ಸೊಹೈಲ್ ಹೋಲಿಕೆಗೆ ಜಾವೇದ್ ಮಿಯಾಂದಾದ್ ತಿರುಗೇಟು ನೀಡಿದ್ದಾರೆ. ನನ್ನ ಅವಧಿಯ ಯಾವೊಬ್ಬ ಆಟಗಾರನನ್ನೂ ಈಗಿನ ಕ್ರಿಕೆಟಿಗರಿಗೆ ಹೋಲಿಕೆ ಮಾಡಬೇಡಿ. ಹಾಗೇ ಹೋಲಿಕೆ ಮಾಡುವುದು ಕೂಡ ಸರಿಯಲ್ಲ ಅಂತ ಮಿಯಾಂದಾದ್ ಅಭಿಪ್ರಾಯಪಟ್ಟಿದ್ದಾರೆ.
ಆಗಿನ ಪೀಳಿಗೆಯ ಕ್ರಿಕೆಟ್ ಬೇರೆಯದ್ದೇ ಆಗಿತ್ತು. ಈಗೀನ ಪೀಳಿಗೆಯ ಕ್ರಿಕೆಟ್ ಬೇರೆಯದ್ದೇ ಆಗಿದೆ. ಆಗಿನ ಪೀಳಿಗೆಯಲ್ಲಿ ಈಗಿನಂತೆ ಸುಲಭವಾಗಿ ರನ್ ಗಳಿಸಲು ಸಾಧ್ಯವಿರಲಿಲ್ಲ. ನಾವು ಒಬ್ಬ ಸುನೀಲ್ ಗವಾಸ್ಕರ್ ಅಥವಾ ಒಬ್ಬ ಸಚಿನ್ ತೆಂಡುಲ್ಕರ್ ಅವರಂತಹ ಆಟಗಾರರು ಹುಡುಕಲು ಸಾಧ್ಯವಿಲ್ಲ. ಅವರೆಲ್ಲಾ ಸಾರ್ವಕಾಲೀಕ ಶ್ರೇಷ್ಠ ಆಟಗಾರರು.
ಅವರ ಕ್ಲಾಸ್ ಮತ್ತು ಗುಣಮಟ್ಟದ ಆಟಕ್ಕೆ ಅವರೇ ಸಾಟಿ ಅಂತ ಮಿಯಾಂದಾದ್ ಹೇಳಿದ್ದಾರೆ.
ಇನ್ನು ಮಾತು ಮುಂದುವರಿಸಿದ್ದ ಮಿಯಾಂದಾದ್, ನಾನು ಮಾಲ್ಕಂ ಮಾರ್ಷಲ್, ರಿಚರ್ಡ್ ಹ್ಯಾಡ್ಲಿ, ಡೆನ್ನಿಸ್ ಲಿಲ್ಲಿ ಜೆಫ್ ಥಾಮ್ಸನ್ ಅವರಂತಹ ಬೌಲರ್‍ಗಳನ್ನು ಎದುರಿಸಿದ್ದೇನೆ. ಅವರೆಲ್ಲಾ ಎಕ್ಸ್ ಪ್ರೆಸ್ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದರು. ವೇಗದ ಎಸೆತದ ಜೊತೆಗೆ ನಿಖರವಾಗಿ ಹಾಗೇ ಬೌನ್ಸರ್ ಎಸೆತಗಳನ್ನು ಹಾಕುತ್ತಿದ್ದರು, ಇಂತಹ ಸಂದರ್ಭದಲ್ಲಿ ನಾವು ಪರಿಸ್ಥಿತಿಯನ್ನು ಅರಿತುಕೊಂಡು ಬ್ಯಾಟಿಂಗ್ ಮಾಡಬೇಕಾಗಿತ್ತು. ಹಾಗಾಗಿ ಹಳೆಯ ಕ್ರಿಕೆಟಿಗರ ಜೊತೆ ಆಧುನಿಕ ಕ್ರಿಕೆಟಿಗರನ್ನು ಹೋಲಿಕೆ ಮಾಡಬೇಡಿ ಎಂದಿದ್ದಾರೆ.
ಹಾಗೇ ಪ್ರಸ್ತುತ ವಿಶ್ವ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ, ಸ್ಟೀವನ್ ಸ್ಮಿತ್, ಕೇನ್ ವಿಲಿಯಮ್ಸನ್, ಜೋಯ್ ರೂಟ್, ಬಾಬರ್ ಅಝಮ್ ಶ್ರೇಷ್ಠ ಬ್ಯಾಟ್ಸ್‍ಮೆನ್‍ಗಳು. ಹಾಗಂತ ಅವರನ್ನು ಕೂಡ ಒಬ್ಬರಿಗೊಬ್ಬರಿಗೆ ಹೋಲಿಕೆ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ. ಅಲ್ಲದೆ ಇವರೆಲ್ಲಾ ಶ್ರೇಷ್ಠ
ಬ್ಯಾಟ್ಸ್‍ಮೆನ್‍ಗಳು. ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಪ್ರತಿಭೆ, ಸಾಮಥ್ರ್ಯ ಹಾಗೂ ಗುಣಮಟ್ಟದ ಆಟವಿದೆ. ಕೆಲವರು ಸ್ಥಿರ ಪ್ರದರ್ಶನ ನೀಡ್ತಾರೆ. ಮತ್ತೊಬ್ಬರು ಶ್ರೇಷ್ಠ ನಿರ್ವಹಣೆಯನ್ನು ನೀಡುತ್ತಾರೆ ಎಂಬುದು ಮಿಯಾಂದಾದ್ ಅಭಿಮತ.
ಕೆಲವು ಕ್ರಿಕೆಟಿಗರು ನಿವೃತ್ತಿಯಾದ ನಂತರವೂ ಜನರ ನೆನಪಿನಲ್ಲಿ ಉಳಿಯುತ್ತಾರೆ. ಈ ಕಾರಣಕ್ಕಾಗಿಯೇ ಇವತ್ತೂ ಸುನೀಲ್ ಗಾವಸ್ಕರ್ ಮತ್ತು ಸಚಿನ್ ತೆಂಡುಲ್ಕರ್ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದಾರೆ. ನೀವು ನಾಲ್ಕು ಶತಕ ದಾಖಲಿಸಿ, ನಾಲ್ಕು ಬಾರಿ ಡಕೌಟಾದ್ರೂ ಜನ ನೆನಪಿನಲ್ಲಿಟ್ಟುಕೊಳ್ಳುವುದು ನಾಲ್ಕು ಶತಕಗಳನ್ನು ಮಾತ್ರ. ಪ್ರತಿ ಪಂದ್ಯದಲ್ಲೂ ಶತಕ ದಾಖಲಿಸಲು ಯಾರಿದಂದಲೂ ಸಾಧ್ಯವಿಲ್ಲ. ತಪ್ಪುಗಳಿಂದ ನಾವು ಪಾಠ ಕಲಿಯಬೇಕಿದೆ. ವಿರಾಟ್ ಕೊಹ್ಲಿ ಬಗ್ಗೆ ಗೌರವಿದೆ. ಅವರ ಸಾಧನೆ ಪ್ರಶಂಸೆಗೆ ಪಾತ್ರವಾದದ್ದು ಎಂದು ಮಿಯಾಂದಾದ್ ಹೇಳಿದ್ದಾರೆ.
ಒಟ್ಟಿನಲ್ಲಿ ಮಿಯಾಂದಾದ್ ಹೇಳುವಂತೆ ಆಯಾ ಕಾಲಕ್ಕೆ ತಕ್ಕಂತೆ ಶ್ರೇಷ್ಠ ಆಟಗಾರರು ಹೊರಹೊಮ್ಮಿದ್ದಾರೆ. 1987ರಲ್ಲಿ ಗವಾಸ್ಕರ್ ವಿದಾಯ ಹೇಳಿದಾಗ ಭಾರತ ತಂಡ ಮುಂದೇನು ಅಂತ ಯೋಚಿಸಿತ್ತು. ಆದ್ರೆ ಎರಡು ವರ್ಷಗಳ ಬಳಿಕ ಸಚಿನ್ ತೆಂಡುಲ್ಕರ್ ಎಂಟ್ರಿಯಾದ್ರು. 90ರ ದಶಕದಲ್ಲಿ ಟೀಮ್ ಇಂಡಿಯಾಗೆ ಸಚಿನ್ ಆಧಾರಸ್ತಂಭವಾಗಿದ್ದರು. ಆದ್ರೆ 2000 ನಂತರ ಹಲವಾರು ಆಟಗಾರರು ಬಂದ್ರು. ಸಚಿನ್ ಒಬ್ಬರ ಮೇಲೆ ತಂಡ ಅವಲಂಬಿತವಾಗಿರಲಿಲ್ಲ. ಹೀಗಾಗಿ ಸಚಿನ್ ವಿದಾಯ ಹೇಳಿದಾಗ ಗವಾಸ್ಕರ್ ವಿದಾಯ ಹೇಳಿದ್ದಾಗಿನ ಪರಿಸ್ಥಿತಿ ಇರಲಿಲ್ಲ. ಯಾಕಂದ್ರೆ ಸಚಿನ್ ಉತ್ತರಾಧಿಕಾರಿಯಾಗಿ ವಿರಾಟ್ ಕೊಹ್ಲಿ ರೂಪುಗೊಂಡಿದ್ದರು.








