ಮಾಸ್ಕ್ ನಲ್ಲೂ ಶುರುವಾಯಿತು ರಾಜಕೀಯ ಪ್ರಚಾರ

ಕೊಲ್ಕತ್ತಾ, ಜೂನ್ 9: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಪಕ್ಷಗಳ ಪ್ರಚಾರಕ್ಕೆ ಮಾಸ್ಕ್ ಕೂಡ ಬಳಕೆಯಾಗುತ್ತಿದೆ.
ಟಿಎಂಸಿ ಹಾಗೂ ಬಿಜೆಪಿ ಪಕ್ಷಗಳು ತಮ್ಮ ಪಕ್ಷದ ಚಿಹ್ನೆಗಳನ್ನು ಮಾಸ್ಕ್ ನಲ್ಲಿ ಮುದ್ರಿಸಿದ್ದು, ಪಕ್ಷದ ಎಲ್ಲಾ ಪ್ರಮುಖ ನಾಯಕರು ತಮ್ಮ ಪಕ್ಷದ ಚಿಹ್ನೆ ಇರುವ ಮಾಸ್ಕ್ ಗಳನ್ನೇ ಧರಿಸುತ್ತಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕೂಡ ಪಕ್ಷದ ಚಿಹ್ನೆ ಇರುವ ಮಾಸ್ಕ್ ಧರಿಸುತ್ತಿದ್ದು, ಜೊತೆಗೆ ‘ಮಾ, ಮಾಟಿ, ಮಾನುಷ್’ ಅಂದರೆ (ತಾಯಿ, ಮಣ್ಣು ಹಾಗೂ ಜನರು) ಎಂದು ಮುದ್ರಿತ ಮಾಸ್ಕ್ ಗಳನ್ನು ಧರಿಸುವ ಮೂಲಕ ಹೊಸತೊಂದು ಟ್ರೆಂಡ್ ಹುಟ್ಟು ಹಾಕಿದ್ದಾರೆ. ‘ಜಿತ್ಬೆ ಬಂಗಲಾ’ (ಬೆಂಗಾಲ್ ಗೆಲ್ಲುತ್ತದೆ) ಎಂಬ ಘೋಷ ವಾಕ್ಯವಿರುವ ಮಾಸ್ಕ್ ಗಳನ್ನು ಟಿಎಂಸಿ ಹಿರಿಯ ಮುಖಂಡರು ಧರಿಸುತ್ತಿದ್ದಾರೆ. ಅಷ್ಟೇ ಅಲ್ಲ ಪರಿಹಾರ ಸಾಮಗ್ರಿಗಳ ಮೇಲೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಫೋಟೊಗಳನ್ನು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಂಟಿಸುತ್ತಿರುವುದಾಗಿ ಬಿಜೆಪಿ ಆರೋಪವನ್ನು ಮಾಡಿದೆ.

ಮಾಧ್ಯಮ ಗೋಷ್ಠಿಯಲ್ಲಿ ಪಕ್ಷದ ಚಿಹ್ನೆ ಇರುವ ಮಾಸ್ಕ್ ಗಳನ್ನು ಧರಿಸಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಅವರು, ರಾಜಕೀಯದಲ್ಲಿ ಪ್ರಚಾರ ಬಹಳ ಮುಖ್ಯವಾದದ್ದು, ಪಕ್ಷದ ಚಿಹ್ನೆ ಇರುವ ಮಾಸ್ಕ್ ಧರಿಸುವುದರಿಂದ ನಮ್ಮ ಪಕ್ಷದ ಪ್ರಚಾರವೂ ಆಗುತ್ತದೆ ಹಾಗೂ ನಮ್ಮ ಸುರಕ್ಷತೆಯೂ ಆಗುತ್ತದೆ ಎಂದು ಹೇಳಿದ್ದಾರೆ. ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಪಕ್ಷದ ಚಿಹ್ನೆ ಇರುವ ಮಾಸ್ಕ್ ಧರಿಸಿದರೆ ನಮ್ಮ ಪಕ್ಷದಿಂದ ಮಾಡಲಾಗಿದೆ ಎಂದು ಜನರಿಗೆ ತಿಳಿಯುತ್ತದೆ ಎಂದು ಹೇಳಿದ್ದಾರೆ.
ಟಿಎಂಸಿ ಮತ್ತು ಬಿಜೆಪಿ ಮಾತ್ರವಲ್ಲ ಸಿಪಿಐ (ಎಂ) ಕಾರ್ಯಕರ್ತರು ಕೂಡಾ ಸುತ್ತಿಗೆ ಮತ್ತು ಕುಡುಗೋಲ ಚಿಹ್ನೆ ಹೊಂದಿರುವ ಮಾಸ್ಕ್ ಗಳನ್ನು ಧರಿಸುತ್ತಿದ್ದಾರೆ.








