Karnataka Rajyotsava | ಮನೆ ಮನೆಯ ಮೇಲೂ ಕನ್ನಡ ಬಾವುಟ ಹಾರಿಸೋಣ
ನವೆಂಬರ್ 1 ಕನ್ನಡ ರಾಜ್ಯೋತ್ಸವ. ಕನ್ನಡ ರಾಜ್ಯೋತ್ಸವಕ್ಕೆ ರಾಜ್ಯ ಸಜ್ಜಾಗಿದೆ. ಇದು ಕನ್ನಡಿಗರ ಹಬ್ಬ. ಜಾತಿ, ಧರ್ಮ ಬೇಧವಿಲ್ಲದೇ ಕರ್ನಾಟಕದಲ್ಲಿರುವ ಪ್ರತಿಯೊಬ್ಬರು ಹೆಮ್ಮೆಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಾರೆ. ಅಂದು ಎಲ್ಲೆಲ್ಲೂ ಕನ್ನಡದ ಬಾವುಟ ವಿರಾಜಮಾನವಾಗಿ ಹಾರಾಡುತ್ತಿರುತ್ತದೆ. ಆ ಸಂಭ್ರಮವನ್ನು ದ್ವಿಗುಣಗೊಳಿಸಲು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮನೆ ಮನೆಯ ಮೇಲೂ ಕನ್ನಡ ಬಾವುಟ ಅಭಿಯಾನಕ್ಕೆ ಕರೆ ಕೊಟ್ಟಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಹೆಚ್ ಡಿ ಕುಮಾರಸ್ವಾಮಿ, ಬಾರಿಸು ಕನ್ನಡ ಡಿಂಡಿಮವ.. ಹಾರಿಸು ಕನ್ನಡ ಬಾವುಟವ.. ಕನ್ನಡ ರಾಜ್ಯೋತ್ಸವದ ದಿನ ನವೆಂಬರ್ ೧ರಂದು ಮನೆ ಮನೆಯ ಮೇಲೂ ಕನ್ನಡ ಬಾವುಟ ಹಾರಿಸೋಣ. ಈ ಮೂಲಕ ಕನ್ನಡತನವನ್ನು ಸ್ವಾಭಿಮಾನದಿಂದ ಸಾರೋಣ. ನಾಡಿನ ಸಮಸ್ತ ಜನರೆಲ್ಲರೂ ತಮ್ಮ ಮನೆಗಳ ಮೇಲೆ ಕನ್ನಡ ಧ್ವಜ ಹಾರಿಸುವ ಮೂಲಕ ಈ ಅಭಿಯಾನದಲ್ಲಿ ಜೊತೆಯಾಗೋಣ ಎಂದು ಹೆಚ್ ಡಿ ಕುಮಾರಸ್ವಾಮಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.