ಬೆಂಗಳೂರು : ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಭಾನುವಾರ ಮಧ್ಯ ರಾತ್ರಿ ಜೀವ ಬೆದರಿಕೆ ಕರೆ ಬಂದಿದೆ. ಈ ಬಗ್ಗೆ ಸ್ವತಃ ಶಾಸಕ ಪ್ರಿಯಾಂಕ್ ಖರ್ಗೆ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ದೂರು ನೀಡಿದ್ದಾರೆ.
07/06/2020 ರ ಭಾನುವಾರ ಮಧ್ಯ ರಾತ್ರಿ ಸುಮಾರು 01 : 30 AM ಗಂಟೆಗೆ ನಮ್ಮ ಸದಾಶಿವನಗರ ನಿವಾಸದ ದೂರವಾಣಿ ಸಂಖ್ಯೆ 080-23615050 ಗೆ ಕರೆ ಬಂದಿದೆ. ಕರೆಯನ್ನು ಮಲ್ಲಿಕಾರ್ಜುನ್ ಖರ್ಗೆರವರು ಸ್ವೀಕರಿಸಿದಾಗ, ವ್ಯಕ್ತಿಯೊಬ್ಬ ಹಿಂದಿ ಹಾಗೂ ಆಂಗ್ಲ ಭಾಷೆಯಲ್ಲಿ ಮಾತನಾಡುತ್ತ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಪ್ರಸ್ತುತ ನಡೆಯುವ ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವ ವಿಷಯವಾಗಿ ಪ್ರಸ್ತಾಪ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಅದೆ ದಿನದ ಮಧ್ಯ ರಾತ್ರಿ ಗಂಟೆ 12 : 36 ನಿಂದ 12:53 AM ವರೆಗೆ ಒಂದು ಅಪರಿಚಿತ ಮೊಬೈಲ್ ಸಂಖ್ಯೆಯಿಂದ ದೂರವಾಣಿ ಸಂಖ್ಯೆಗೆ ಸುಮಾರು 10 ಕ್ಕೂ ಹೆಚ್ಚು ಬಾರಿ ಪದೆ ಪದೆ ಕರೆ ಬಂದಿದೆ.
ಆ ಸಮಯದಲ್ಲಿ ಪ್ರಿಯಾಂಕ್ ಖರ್ಗೆ ಕರೆ ಸ್ವೀಕರಿಸಿರುವುದಿಲ್ಲ. ನಂತರ ಸುಮಾರು 1:00 AM ಗಂಟೆಗೆ ಮೊಬೈಲ್ ಸಂಖ್ಯೆಗೆ ಖಾಸಗಿ (Private Number or Unknown number) ಸಂಖ್ಯೆಯಿಂದ ಕರೆ ಬಂದಿದೆ. ಆಗ ಪ್ರಿಯಾಂಕ್ ಖರ್ಗೆ ಕರೆ ಸ್ವೀಕರಿಸಿದಾಗ ವ್ಯಕ್ತಿಯೊಬ್ಬರು ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುತ್ತ, ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭೆ ಚುನಾವಣೆಯಿಂದ ಹಿಂದೆ ಸರಿಯುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಿಯಾಂಕ್ ಖರ್ಗೆ ಕೂಡ ಜೀವ ಬೆದರಿಕೆಯನ್ನು ಹಾಕಿರುತ್ತಾರೆ. ಕರೆ ಮಾಡಿರುವ ಮೊಬೈಲ್ ಸಂಖ್ಯೆಯ ಗ್ರೀನ್ ಶಾಟ್ (Screenshot) ಪ್ರತಿಯನ್ನು ಪ್ರಿಯಾಂಕ್ ಖರ್ಗೆ ಪೊಲೀಸ್ ಮಹಾ ನಿರ್ದೇಶಕರಿಗೆ ನೀಡಿದ್ದಾರೆ. ಅಲ್ಲದೆ ಈ ಎರಡು ಬೆದರಿಕೆ ಕರೆ ಮಾಡಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಎಂದು ಶಾಸಕ ಪ್ರಿಯಾಂಕ್ ಖರ್ಗೆ ದೂರು ನೀಡಿದ್ದಾರೆ.