ಭಾರತ ಚೀನಾ ಗಡಿ ವಿಚಾರ – ರಾಜನಾಥ್ ಸಿಂಗ್ vs ರಾಹುಲ್ ಗಾಂಧಿ
ಹೊಸದಿಲ್ಲಿ, ಜೂನ್ 10: ಭಾರತ-ಚೀನಾ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಭಾರತದಲ್ಲಿ ರಾಜಕಾರಣಿಗಳ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಿಗೆ ಟ್ವೀಟ್ ಮಾಡಿ ಲಡಾಖ್ ನಲ್ಲಿ ಏನಾಗುತ್ತಿದೆ ಎಂದು ಉತ್ತರಿಸಲು ನಿಮಗೆ ಸಾಧ್ಯವೇ ಎಂದು ಪ್ರಶ್ನಿಸಿದ್ದು, ಅದಕ್ಕೆ ರಾಜನಾಥ್ ಸಿಂಗ್ ಅವರು ನಿಮ್ಮ ಪ್ರಶ್ನೆಗೆ ಪಾರ್ಲಿಮೆಂಟ್ ನ ಒಳಗೆ ಉತ್ತರಿಸುತ್ತೇನೆ ಎಂದು ಖಡಕ್ ಆಗಿ ಹೇಳಿದ್ದಾರೆ.
ರಾಜನಾಥ್ ಸಿಂಗ್ ಮತ್ತು ರಾಹುಲ್ ಗಾಂಧಿ ಮಧ್ಯೆ ಸಮರ ಆರಂಭವಾಗಲು ಕಾರಣವಾದದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆ. ಕೆಲವು ದಿನಗಳ ಹಿಂದೆ ಪಕ್ಷದ ವತಿಯಿಂದ ನಡೆದ ವರ್ಚುವಲ್ ಸಭೆಯಲ್ಲಿ, ಅಮೆರಿಕಾ, ಇಸ್ರೇಲ್ ಬಳಿಕ, ಗಡಿಭಾಗದಲ್ಲಿ ಸಾಕಷ್ಟು ಸುರಕ್ಷತೆ ಹೊಂದಿರುವ ದೇಶ ಭಾರತ
ಎಂದು ಅಮಿತ್ ಶಾ ಹೇಳಿದ್ದರು.
ಅಮಿತ್ ಶಾ ರ ಹೇಳಿಕೆಗೆ ವ್ಯಂಗ್ಯ ಮಾಡಿದ ರಾಹುಲ್ ಗಾಂಧಿ ಗಡಿ ಭಾಗದಲ್ಲಿ ಏನಾಗುತ್ತಿದೆ ಎಂಬುವುದು ಪ್ರತಿಯೊಬ್ಬರಿಗೂ ಗೊತ್ತಿದೆ. ನೀವು ನಿಮ್ಮ ಸಂತೋಷಕ್ಕಾಗಿ ಹಾಗೆ ಹೇಳುತ್ತಿದ್ದೀರಿ ಎಂದು ಟ್ವೀಟ್ ಮಾಡಿದರು.
ಈ ಟ್ವೀಟ್ ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕವನದ ಮೂಲಕ ರೀಟ್ವೀಟ್ ಮಾಡಿದ್ದಾರೆ. ‘ಹೃದಯ’ ಎನ್ನುವ ಪದದ ಬದಲು ರಾಜನಾಥ್ ಸಿಂಗ್ ‘ಕೈ’ ಎಂದು ಬದಲಾಯಿಸಿ, ಕೈನಲ್ಲಿ ನೋವು ಕಾಣಿಸಿದರೆ ಅದಕ್ಕೆ ಔಷಧಿ ನೀಡಬಹುದು, ಆದರೆ ಆ ಕೈ ಯೇ ನೋವಾಗಿದ್ದರೆ ಏನು ಮಾಡಲು ಸಾಧ್ಯ ಎಂದು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದ ಚಿಹ್ನೆಯನ್ನು ಚುಚ್ಚಿದ್ದಾರೆ.
ಪಕ್ಷದ ಚಿಹ್ನೆ ಬಗ್ಗೆ ವ್ಯಂಗ್ಯ ಮಾಡಿರುವುದಕ್ಕೆ ಗರಂ ಆಗಿರುವ ರಾಹುಲ್ ಗಾಂಧಿ, ಕೈ ಚಿಹ್ನೆಯ ಬಗ್ಗೆ ವ್ಯಂಗ್ಯ ಮಾಡುವ ನಿಮಗೆ ಭಾರತದ ಲಡಾಖ್ ನ ಗಡಿ ಪ್ರದೇಶದಲ್ಲಿ ಏನಾಗುತ್ತಿದೆ ಎಂದು ಉತ್ತರಿಸಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ.
ಅದಕ್ಕೆ ರಾಜನಾಥ್ ಸಿಂಗ್ ಮಹಾರಾಷ್ಟ್ರದ ಜನರ ಜೊತೆ ಏರ್ಪಡಿಸಿದ್ದ ಜನ ಸಂವಾದ ವರ್ಚುವಲ್ ಸಭೆಯಲ್ಲಿ ರಾಹುಲ್ ಗಾಂಧಿಯವರ ಲಡಾಖ್ ಗಡಿಯಲ್ಲಿ ಏನಾಗುತ್ತಿದೆ ಎಂಬ ಪ್ರಶ್ನೆಗೆ ನಾನು ಪಾರ್ಲಿಮೆಂಟ್ ಒಳಗೆ ಉತ್ತರಿಸುತ್ತೇನೆ. ಜನರನ್ನು ದಾರಿಗೆ ತಪ್ಪಿಸುವುದಿಲ್ಲ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.