ಮೈಸೂರು : ಮಾಜಿ ಸಚಿವ ಹೆಚ್.ವಿಶ್ವನಾಥ್ ಅವರಿಗೆ ಎಂಎಲ್ ಸಿ ಸ್ಥಾನ ನೀಡುವುದರ ಬಗ್ಗೆ ಮೈಸೂರಿನಲ್ಲಿ ಸಾರಾ ಮಹೇಶ್ ಪ್ರತಿಕ್ರಿಯೆ ನೀಡಿದ್ದು, ಹೆಚ್. ವಿಶ್ವನಾಥ್ ಬಹಳ ವರ್ಷಗಳ ಕಾಲ ಕಾಂಗ್ರೆಸ್ ನಲ್ಲಿದ್ದಾಗ ಸೂಕ್ಷ್ಮಾತಿ ಸೂಕ್ಷ್ಮ ಜಾತಿಗಳಿಗೆ ವಿಧಾನ ಪರಿಷತ್ ಸ್ಥಾನ ನೀಡುವಂತೆ ಕೇಳುತ್ತಿದ್ದರು. ಈಗ ಎಂಎಲ್ ಸಿ ಸ್ಥಾನ ಕೇಳುತ್ತಿರುವ ಇವರದು ಸೂಕ್ಷ್ಮಾತಿಸೂಕ್ಷ್ಮ ಜಾತಿಯೇ ಎಂದು ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಹೇಶ್, ಜೆಡಿಎಸ್ 80 ವರ್ಷದ ವ್ಯಕ್ತಿಯನ್ನು ರಾಜ್ಯಸಭೆಗೆ ಕಳುಹಿಸುತ್ತಿದೆ ಎಂದು ವ್ಯಂಗ್ಯವಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರಿಗೆ ತಿರುಗೇಟು ನೀಡಿದರು. ರಾಜ್ಯಸಭೆ ಆಯ್ಕೆ ಸಂಬಂಧ ಇವರು ಕಳುಹಿಸಿದ ಪಟ್ಟಿಯನ್ನ ಅವರ ಪಕ್ಷದವರೇ ಏನು ಮಾಡಿದರು ಎನ್ನುವುದು ದೇಶಕ್ಕೆ ಗೊತ್ತಿದೆ. ಅವರ ಪರಿಸ್ಥಿತಿ ನೋಡಿಕೊಳ್ಳಲಿ ಸಾಕು ಎಂದರು.
ಇದೇ ವೇಳೆ ಮೈಮುಲ್ ನೇಮಕಾತಿ ಬಗ್ಗೆ ಪ್ರತಿಕ್ರಿಯಿಸಿ, ಮೈಸೂರು ಹಾಲು ಒಕ್ಕೂಟದಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ನಮ್ಮ ಹೋರಾಟಕ್ಕೆ ನ್ಯಾಯ ಸಿಕ್ಕಿದೆ. ಮೈಮುಲ್ ಆಡಳಿತ ಮಂಡಳಿಗೆ ತುರ್ತು ನೋಟಿಸ್ ಜಾರಿ ಮಾಡಿದ್ದು, ಜೂನ್ 29ರಂದು ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದೆ. ಮೈಮುಲ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತತ್ ಕ್ಷಣವೇ ಪರೀಕ್ಷಾ ಪ್ರಕ್ರಿಯೆಯ ಹೊಣೆ ಹೊತ್ತಿದ್ದ ಏಜೆನ್ಸಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.