ಮುಸ್ಸಂಜೆಯಲ್ಲಿ ಒಂದು ಹಕ್ಕಿಯ ಜೀವ ಉಳಿಸಿದ ಕಥೆಯನ್ನು ಹೇಳ್ತಾಳೆ ಧೋನಿ ಮಗಳು ಝೀವಾ…!
ಈ ಲಾಕ್ ಡೌನ್ ಟೈಮ್ ನಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ರಾಂಚಿಯ ತಮ್ಮ ಫಾರ್ಮ್ ಹೌಸ್ ನಲ್ಲಿ ಬಿಂದಾಸ್ ಆಗಿ ತನ್ನ ಕುಟುಂಬದ ಜೊತೆಗಿದ್ದಾರೆ. ಮಗಳ ಜೊತೆ ಆಟವಾಡುತ್ತಾ, ತಮ್ಮ ತೋಟದ ಕೆಲಸದಲ್ಲೂ ಧೋನಿ ನಿರತರಾಗಿದ್ದಾರೆ. ತೋಟದ ಕೆಲಸ ಹಾಗೂ ಓಡಾಡಲು ಇತ್ತೀಚೆಗಷ್ಟೇ ಟ್ರ್ಯಾಕ್ಟರ್ ಕೂಡ ಖರೀದಿ ಮಾಡಿದ್ದರು.
ಇದೀಗ ಧೋನಿ ಮತ್ತು ಅವರ ಮಗಳು ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸುದ್ದಿಯಾಗಿರೋದು ಒಂದು ಪಕ್ಷಿಯ ಜೀವ ಉಳಿಸಿರುವುದಕ್ಕೆ. ಅದರಲ್ಲೇನೂ ಅಚ್ಚರಿ ಅಂತೀರಾ… ಈಗಾಗಲೇ ಧೋನಿ ಮತ್ತು ಸಾಕ್ಷಿ ಸಿಂಗ್ ಅವರು ಇನ್‍ಸ್ಟಾಗ್ರಾಂ ಖಾತೆಯನ್ನು ಹೊಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದ್ರೆ ಈಗ ಧೋನಿ ಮಗಳು ಝೀವಾ ಹೆಸರಿನಲ್ಲೂ ಇನ್‍ಸ್ಟಾಗ್ರಾಂ ಖಾತೆ ಇದೆ. ಅಲ್ಲದೆ ಝೀವಾ ತನ್ನ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಒಂದು ಹಕ್ಕಿಯ ಜೀವ ಉಳಿಸಿದ ಕಥೆಯನ್ನು ಶೇರ್ ಮಾಡಿಕೊಂಡಿದ್ದಾರೆ.
ಇಂದು ಸಂಜೆ ನನ್ನ ಮನೆಯ ಆವರಣದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿರುವ ಒಂದು ಹಕ್ಕಿಯನ್ನು ನೋಡಿದ್ದೆ. ಆಗ ನಾನು ಪಪ್ಪ ಮತ್ತು ಮುಮ್ಮಾ ಅಂತ ಬೊಬ್ಬೆ ಹೊಡೆದೆ. ಆಗ ತಕ್ಷಣವೇ ಓಡೋಡಿ ಬಂದ್ರು ನನ್ನ ಪಪ್ಪ ಮತ್ತು ಮುಮ್ಮಾ. ಪ್ರಜ್ಞೆ ಬಿದ್ದಿರುವ ಹಕ್ಕಿಯನ್ನು ತಕ್ಷಣವೇ ನನ್ನ ಪಪ್ಪ ಕೈಯಲ್ಲಿ ಹಿಡಿದಿಕೊಂಡು ಅದಕ್ಕೆ ಸ್ವಲ್ಪ ನೀರು ಕುಡಿಸಿದ್ರು. ಕೆಲವು ಸಮಯದ ನಂತರ ಹಕ್ಕಿ ನಿಧಾನವಾಗಿ ಕಣ್ಣು ಬಿಟ್ಟಿತ್ತು. ಆಗ ನಾವೆಲ್ಲರೂ ತುಂಬಾನೇ ಖುಷಿ ಪಟ್ಟೇವು ಅಂತ ಝೀವಾ ತನ್ನ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಆ ನಂತರ ಹಕ್ಕಿಯನ್ನು ಒಂದು ಬಾಸ್ಕೆಟ್‍ನಲ್ಲಿ ಸ್ವಲ್ಪ ಎಲೆಗಳನ್ನು ಹಾಕಿ ಅದರ ಮೇಲೆ ಕೂರಿಸಿದ್ದೇವು. ಹಾಗೇ ಸ್ವಲ್ಪ ಹೊತ್ತು ಅದರ ಜೊತೆ ಆಟವಾಡಿದ್ದೇವು. ಆಗ ಮುಮ್ಮಾ ಹೇಳಿದ್ರು. ಈ ಹಕ್ಕಿಗೆ ಮರಕುಟಿಕ ಎಂದು ಕರೆಯುತ್ತಾರೆ ಅಂತ. ಆಹ್ಹಾ ಎಷ್ಟು ಚೆಂದ.. ಎಷ್ಟು
ಚೆಂದವಾಗಿದೆ ಗೊತ್ತಾ ಆ ಪುಟ್ಟ ಹಕ್ಕಿ. ಅದು ಸ್ವಲ್ಪ ಚೇತರಿಸಿಕೊಂಡ ನಂತರ ಹಾರಿ ಹೋಯ್ತು. ಆದ್ರೆ ನನಗೆ ಇಷ್ಟವಾಗಲಿಲ್ಲ. ಯಾಕಂದ್ರೆ ಅದು ನನ್ನ ಜೊತೆನೇ ಇರಬೇಕಿತ್ತು, ಆದ್ರೆ ಮುಮ್ಮಾ ಹೇಳಿದ್ರು. ಆ ಹಕ್ಕಿ ತನ್ನ ತಾಯಿಯ ಬಳಿ ಹೋಯ್ತು, ಆದ್ರೆ ನನಗೆ ವಿಶ್ವಾಸವಿದೆ. ನಾನು ಆ ಹಕ್ಕಿಯನ್ನು ಮತ್ತೆ ನೋಡುತ್ತೇನೆ ಅಂತ ಝೀವಾ ಹೇಳುತ್ತಾರೆ.








