ಮಾಜಿ ರಣಜಿ ಕ್ರಿಕೆಟಿಗನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ
ತಿರುವನಂತಪುರ, ಜೂನ್ 10: ಕೇರಳದ ಮಾಜಿ ರಣಜಿ ಕ್ರಿಕೆಟಿಗ ಜಯಮೋಹನ್ ಥಾಂಪಿ ಅವರ ಮೃತಶರೀರವು ತಿರುವನಂತಪುರಂನಲ್ಲಿರುವ ಅವರ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಜಯಮೋಹನ್ ಥಂಪಿ ಸಾವಿಗೆ ಸಂಬಂಧಿಸಿದಂತೆ ಅವರ ಮಗ ಅಶ್ವಿನ್ ಅವರನ್ನು ಕೊಲೆ ಮಾಡಿರುವ ಅನುಮಾನದಡಿಯಲ್ಲಿ ಬಂಧಿಸಲಾಗಿದೆ.
64 ವರ್ಷ ಪ್ರಾಯದ ಜಯಮೋಹನ್ ಥಾಪಿ ಅವರು ತ್ರವನ್ಕೋರ್ನಲ್ಲಿ ಬ್ಯಾಂಕ್ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ್ದರು. ಇವರು ಪ್ರಥಮ ದರ್ಜೆ ಕ್ರಿಕೆಟಿನಲ್ಲಿ ಕೇರಳ ತಂಡವನ್ನು ಆರು ಬಾರಿ ಪ್ರತಿನಿಧಿಸಿದ್ದರು ಮತ್ತು ತಂಡದಲ್ಲಿ ವಿಕೆಟ್ ಕೀಪರ್ -ಬ್ಯಾಟ್ಸ್ ಮ್ಯಾನ್ ಆಗಿ ಗುರುತಿಸಿಕೊಂಡಿದ್ದರು. 1979 ಮತ್ತು 1982ರ ನಡುವೆ ಬಲಗೈ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ ಮ್ಯಾನ್ ಆಗಿದ್ದ ಜಯಮೋಹನ್ ಅವರು ಕೇರಳ ತಂಡದ ಪರವಾಗಿ ಆಟವಾಡಿದ್ದರು. ಇದರ ಮೊದಲು ಮೂರು ವರ್ಷಗಳ ಕಾಲ ಕೇರಳ ಅಂಡರ್-22 ತಂಡದ ಪರವಾಗಿಯೂ ಆಡಿದ್ದರು ಎಂದು ಕೇರಳ ಕ್ರಿಕೆಟ್ ಸಂಸ್ಥೆ ಹೇಳಿದೆ.
ಜಯಮೋಹನ್ ಅವರ ಪತ್ನಿ ಅನಿತಾ ಎರಡು ವರ್ಷಗಳ ಹಿಂದೆ ತೀರಿಕೊಂಡಿದ್ದು, ಅವರ ಸಾವಿನ ನಂತರ ಜಯಮೋಹನ್ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ. ಕೇರಳದ ಮನಕಾಡ್ ನಲ್ಲಿ ಮಗನ ಜತೆ ಜಯಮೋಹನ್ ಅವರು ವಾಸಿಸುತ್ತಿದ್ದು, ಮನೆಯಲ್ಲಿಯೇ ಅವರು ಅನುಮಾನಾಸ್ಪದವಾಗಿ ಸಾವಿಗೀಡಾದ ಹಿನ್ನಲೆಯಲ್ಲಿ ಮಗ ಅಶ್ವಿನ್ನನ್ನು ಪೊಲೀಸರು ಬಂಧಿಸಿದ್ದಾರೆ. ಜಯಮೋಹನ್ ಅವರ ಮಗ ಅಶ್ವಿನ್ ಕೇರಳದಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದು, ಮನೆಯಲ್ಲಿ ಶವವಿದ್ದರೂ ಯಾರಿಗೂ ಮಾಹಿತಿ ನೀಡಿರಲಿಲ್ಲ.
ವಿಚಾರಣೆ ವೇಳೆ ತಾನೇ ಕೊಲೆ ಮಾಡಿರುವುದಾಗಿ ಅವರ ಮಗ ಅಶ್ವಿನ್ ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದ್ದು ಕೊಲೆಗೆ ಕಾರಣ ತಿಳಿದುಬಂದಿಲ್ಲ. ತನಿಖೆಯನ್ನು ಮುಂದುವರಿಸಿರುವ ಪೊಲೀಸರು ಕೊಲೆ ಮಾಡಲು ಅಶ್ವಿನ್ ಗೆ ಸಹಕರಿಸಿದ ಹಿನ್ನೆಲೆಯಲ್ಲಿ ನೆರೆಹೊರೆಯವರನ್ನೂ ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಜಯಮೋಹನ್ ಅವರ ಹಣೆಯಲ್ಲಿ ಬಲವಾದ ಪೆಟ್ಟಿನಿಂದ ರಕ್ತಸ್ರಾವವಾಗಿರುವ ಗುರುತು ಇರುವ ಹಿನ್ನೆಲೆಯಲ್ಲಿ ಮಗ ಅವರನ್ನು ಬಲವಂತವಾಗಿ ದೂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ