ಪ್ರತಿದಿನ 1 ತಾಸು ಹೆಚ್ಚು ಕೆಲಸ ಮಾಡುವಂತೆ ನೌಕರರಿಗೆ ಸಿಎಂ ಬೊಮ್ಮಾಯಿ ಸಲಹೆ
ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ 7ನೇ ವೇತನ ಆಯೋಗ ರಚಿಸಿದ್ದಕ್ಕಾಗಿ ಸರ್ಕಾರಿ ನೌಕರರ ಸಂಘದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಗಳೂರಿನಲ್ಲಿಂದು ಅಭಿನಂದನೆ ಸಲ್ಲಿಸಲಾಯಿತು.
ಸನ್ಮಾನ ಸ್ವೀಕರಿಸಿದ ಮುಖ್ಯಮಂತ್ರಿ ಅವರು, ಸರ್ಕಾರಿ ನೌಕರರ ವೇತನ ಹಾಗೂ ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಅದಕ್ಕೆ ಪ್ರತಿಯಾಗಿ ಸರ್ಕಾರಿ ನೌಕರರು ಪ್ರತಿದಿನ 8 ಗಂಟೆ ಜೊತೆಗೆ ಒಂದು ಗಂಟೆ ಹೆಚ್ಚಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ನವಭಾರತ ನಿರ್ಮಾಣಕ್ಕೆ ನವ ಕರ್ನಾಟಕ ನಿರ್ಮಾಣದ ಮೂಲಕ ಅಡಿಪಾಯ ಹಾಕಲಾಗುವುದು. ದೇಶದ ಐದು ಟ್ರಿಲಿಯನ್ ಆರ್ಥಿಕತೆಗೆ ಕರ್ನಾಟಕ ಒಂದು ಟ್ರಿಲಿಯನ್ ಆರ್ಥಿಕ ಪ್ರಗತಿಯ ಪಾಲು ನೀಡುವ ಗುರಿಯೊಂದಿಗೆ ಕೆಲಸ ನಿರ್ವಹಿಸುತ್ತಿದೆ. ಸರ್ಕಾರದ ಅಧಿಕಾರಿಗಳು, ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಬಡವರ ಶ್ರೇಯೋಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ಮೊದಲ ಬಾರಿಗೆ ನಿಗದಿತ ಕಾಲಾವಧಿ 5 ವರ್ಷದೊಳಗೆ ವೇತನ ಪರಿಷ್ಕರಣೆಗಾಗಿ ಆಯೋಗ ರಚನೆ ಮಾಡಲಾಗಿದೆ. ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಡಾ. ಸುಧಾಕರ್ ರಾವ್ ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು, ವರದಿ ಬಂದ ನಂತರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.
basavaraj bommai : CM advises employees to work 1 hour more every day








