ಬೆಂಗಳೂರು : ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದೆ ತಡ ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಪಡೆಯಲು ಲಾಬಿ ಮಾಡುವ ಕಾರ್ಯಕ್ಕೆ ಚುರುಕು ಮುಟ್ಟಿದಂತೆ ಆಗಿದೆ. ಕಾಂಗ್ರೆಸ್ ತನ್ನ ಸಂಖ್ಯಾಬಲ ದಿಂದ ಎರಡು ಸ್ಥಾನಗಳನ್ನು ಗೆಲ್ಲುತ್ತದೆ. ಆದರೆ ಎರಡು ಸ್ಥಾನಕ್ಕೆ ಹಲವರು ಪೈಪೋಟಿ ಮಾಡುತ್ತಿದ್ದಾರೆ.
ಎರಡು ಸ್ಥಾನಗಳಲ್ಲಿ ಅಲ್ಪಸಂಖ್ಯಾತರಿಗೊಂದು, ಹಿಂದೂಳಿದ ವರ್ಗಕ್ಕೆ ಸೇರಿದವರಿಗೊಂದು ಸ್ಥಾನ ನೀಡುವಂತೆ ಒತ್ತಡಗಳು ಪಕ್ಷದಲ್ಲಿ ಕೇಳಿ ಬಂದಿದೆ. ಅದರಲ್ಲೂ ಒಂದು ಸ್ಥಾನ ಮಹಿಳಾ ಮೀಸಲಾತಿ ನೀಡಬೇಕು ಎಂಬ ಮಾತುಗಳು ಕೇಳಿ ಬಂದಿವೆ.
ಹಾಲಿ ಪರಿಷತ್ ಸದಸ್ಯ ನಜೀರ್ ಅಹ್ಮದ್ ಮತ್ತು ಮಾಜಿ ಕೇಂದ್ರ ಸಚಿವೆ ಮಾರ್ಗರೇಟ್ ಆಳ್ವ ಅವರ ಪುತ್ರಿ ನಿವೇಧಿತ ಆಳ್ವ ಅಲ್ಪಸಂಖ್ಯಾತ ಕೋಟಾದಡಿ ಟಿಕೆಟ್ ಪಡೆಯಲು ತೆರೆಮರೆಯಲಿ ಲಾಬಿ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇನ್ನೂ ಹಿಂದೂಳಿದ ಕೋಟಾದಡಿ ಟಿಕೆಟ್ ಪಡೆಯಲು ಮಾಜಿ ಸಚಿವ ಎಂ.ಆರ್. ಸೀತರಾಮ್, ವೇಣುಗೋಪಾಲ್, ಡಿ.ಕೆ. ಮೋಹನ್ ಬಾಬು, ಬೋಸರಾಜು, ಹೆಚ್.ಎಂ ರೇವಣ ಸೇರಿದಂತೆ ಇನ್ನೂ ಕೆಲವರು ತಮ್ಮ ರಾಜಕೀಯ ಗುರುಗಳ ಮನೆಯ ಬಾಗಿಲು ತಟ್ಟಿದ್ದಾರೆ ಎನ್ನಲಾಗಿದೆ.
ಇದಲ್ಲದೆ ಮಹಿಳಾ ಮೀಸಲಾತಿಯಲ್ಲಿ ಟಿಕೆಟ್ ಪಡೆಯಲು ಮಾಜಿ ಸಚಿವೆ ರಾಣಿ ಸತೀಶ್, ಮೋಟಮ್ಮ, ಜಯಮಾಲ, ಭಾರತಿ ಶಂಕರ್ ಹೆಸರುಗಳನ್ನು ಮುನ್ನೆಲೆಗೆ ಬಂದಿವೆ.
ಆದರೆ ಟಿಕೆಟ್ ನೀಡುವ ವಿಚಾರದಲ್ಲಿ ಪಕ್ಷದ ಪ್ರಮುಖರ ಜೊತೆ ಚರ್ಚಿಸಿ ಪಟ್ಟಿ ತಯಾರು ಮಾಡಲು ಡಿ.ಕೆ ಶಿವಕುಮಾರ್ ಸಿದ್ದತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಪಟ್ಟಿಯನ್ನು ತಯಾರಿಸಿ ಕಾಂಗ್ರೆಸ್ ಹೈಕಮಾಂಡ್ ಗೆ ಕಳಿಸಲಾಗುವುದು. ಅಲ್ಲಿ ಟಿಕೆಟ್ ಅಂತಿಮವಾಗಲಿದೆ. ಆದರೆ ರಾಜ್ಯ ನಾಯಕರ ಮಾತಿಗೆ ಮನ್ನಣೆ ಸಿಗುವ ಸಾಧ್ಯತೆಯಿದೆ ಎಂಬ ಸುಳಿವು ಪಕ್ಷದ ಮೂಲಗಳಿಂದ ತಿಳಿದಿದೆ.








