Tippu Jayanthi ಆಚರಣೆ ಜಾರಿಗೆ ತಂದದ್ದೇ ದೊಡ್ಡ ತಪ್ಪು – ಸಿಎಂ ಇಬ್ರಾಹಿಂ
ಟಿಪ್ಪು ಜಯಂತಿ ಆಚರಣೆಯನ್ನು ಜಾರಿಗೆ ತಂದದ್ದೇ ದೊಡ್ಡ ತಪ್ಪು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿಕೆ ನೀಡಿದ್ದಾರೆ.
ಮುಸ್ಲಿಂ ಸಮುದಾಯದಲ್ಲಿ ಯಾವುದೇ ವ್ಯಕ್ತಿಗಳ ಜಯಂತಿ ಆಚರಣೆ ಇಲ್ಲ. ಇದೇ ಕಾರಣಕ್ಕಾಗಿ ನಾನು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡುವುದು ಬೇಡವೆಂದು ಹೇಳಿದ್ದೆ. ಆದರೆ, ಮತ ಓಲೈಸುವ ಕಾರಣಕ್ಕಾಗಿಯೇ ಟಿಪ್ಪು ಜಯಂತಿ ಮಾಡಿದರು ಎಂದು ಇಬ್ರಾಹಿಂ ಟೀಕಿಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಂ, ಮುಸ್ಲಿಂ ಸಮುದಾಯದಲ್ಲಿ ವ್ಯಕ್ತಿ ಪೂಜೆ, ಜಯಂತಿ, ಮೆರವಣಿಗೆಗೆ ಅವಕಾಶವೇ ಇಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಸರಕಾರ ಟಿಪ್ಪು ಜಯಂತಿ ಆಚರಣೆ ಜಾರಿಗೆ ಬಂತು.
ಆಗ ಇದೇ ಕಾರಣಕ್ಕೆ ನಾನು ಟಿಪ್ಪು ಜಯಂತಿ ಬೇಡವೆಂದರೂ, ಮತಗಳನ್ನು ಓಲೈಸುವ ದೃಷ್ಟಿಕೋನದಿಂದ ಟಿಪ್ಪು ಜಯಂತಿ ಮಾಡಿದ್ದಾರೆ. ಇದು ದೊಡ್ಡ ತಪ್ಪು. ಈಗ ಪುನಃ ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನರ 100 ಅಡಿ ಪ್ರತಿಮೆ ನಿರ್ಮಾಣ ಮಾಡುವ ಬಗ್ಗೆ ಪ್ರಸ್ತಾಪವನ್ನು ಮಾಡಲಾಗಿದೆ. ಇದನ್ನು ನಮ್ಮ ಮುಸ್ಲಿಂ ಸಮುದಾಯ ಒಪ್ಪಿಕೊಳ್ಳಲು ಸಾಧ್ಯವಿಲ್ಲ.
ಪೂಜೆ ಮಾಡುವುದು, ಕುಂಕುಮ ಹಚ್ಚುವುದು ನಮ್ಮ ಧರ್ಮದಲ್ಲಿ ಇಲ್ಲ. ನಮ್ಮಲ್ಲಿರುವುದು ಬಡವರಿಗೆ ಸಹಾಯ ಮಾಡುವುದು ಮತ್ತು ಇದೇ ನಮ್ಮಲ್ಲಿರುವ ಆಚರಣೆ. ಹಾಗಾಗಿ ಟಿಪ್ಪು ಪ್ರತಿಮೆ ಮಾಡುವ ಪ್ರಶ್ನೆಯೇ ಇಲ್ಲವೆಂದು ಹೇಳಿದ ಇಬ್ರಾಹಿಂ ಎಲ್ಲಿಯಾದರೂ ನಮ್ಮ ಧರ್ಮದ ಪ್ರತಿಮೆ ಇರುವುದನ್ನು ತೋರಿಸಿ ಎಂದು ಸವಾಲು ಹಾಕಿದರು.
ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನರ ನೂರಡಿ ಪ್ರತಿಮೆ ನಿರ್ಮಿಸುವುದಾಗಿ ನೀಡಿರುವ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಸೇರಿದಂತೆ ಮುಸ್ಲಿಂ ಸಮುದಾಯದ ಹಲವರು ಅಸಮ್ಮತಿ ಸೂಚಿಸಿದ್ದಾರೆ.








