ಜೂನ್ 21 ಕಂಕಣ ಸೂರ್ಯಗ್ರಹಣ
ಹೊಸದಿಲ್ಲಿ, ಜೂನ್ 11: ಜೂನ್ 21 ಭಾನುವಾರ ಕಂಕಣ ಸೂರ್ಯಗ್ರಹಣ ಸಂಭವಿಸಲಿದೆ. ಜೂನ್ 21 ರ ಅಮಾವಾಸ್ಯೆ ದಿನ ಸಂಭವಿಸುವ ಕಂಕಣ ಸೂರ್ಯಗ್ರಹಣ ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಗೋಚರವಾಗಲಿದೆ.
ರಾಜಸ್ಥಾನ, ಪಂಜಾಬ್, ಹರ್ಯಾಣದ ಹಲವು ಭಾಗಗಳಲ್ಲಿ ಅಂದು ಸೂರ್ಯ ಗ್ರಹಣದ ಸಂದರ್ಭದಲ್ಲಿ ಕಂಕಣಾಕೃತಿಯಲ್ಲಿ ಸೂರ್ಯ ಕಾಣಲಿದ್ದಾನೆ.
ಕರ್ನಾಟಕ ಸೇರಿದಂತೆ ಉಳಿದೆಡೆ ಖಂಡಗ್ರಾಸ ಸೂರ್ಯಗ್ರಹಣ ಗೋಚರಿಸಲಿದೆ.ಬೆಂಗಳೂರಿನಲ್ಲಿ ಜೂನ್ 21 ರ ಭಾನುವಾರ ಬೆಳಗ್ಗೆ 10.13 ಕ್ಕೆ ಗ್ರಹಣ ಆರಂಭವಾಗಿ ಮಧ್ಯಾಹ್ನ 1.32 ಕ್ಕೆ ಗ್ರಹಣ ಮೋಕ್ಷವಾಗುತ್ತದೆ. ರಾಜ್ಯದ ವಿವಿಧೆಡೆ ಗ್ರಹಣ ಆರಂಭ ಮತ್ತು ಮೋಕ್ಷ ಕಾಲ ದಲ್ಲಿ ವ್ಯತ್ಯಾಸ ಇರಲಿದೆ ಎಂದು ಹೇಳಲಾಗಿದೆ.
ಈ ಗ್ರಹಣವು 2020ನೇ ವರ್ಷದಲ್ಲಿ ಭಾರತದಲ್ಲಿ ಗೋಚರಿಸುವ ಏಕೈಕ ಸೂರ್ಯಗ್ರಹಣವಾಗಿದೆ. ಇದು ಕಂಕಣ ಸೂರ್ಯಗ್ರಹಣವಾಗಿರುವ ಹಿನ್ನಲೆಯಲ್ಲಿ ಶೇಕಡಾ 99.4ರಷ್ಟು ಸೂರ್ಯನ ಮೇಲ್ಮೈಯಲ್ಲಿ ಉಳಿಯುತ್ತದೆ. ಜೂನ್ 21ರಂದು ಭಾನುವಾರ ಭಾರತ, ಆಗ್ನೇಯ ಯುರೋಪ್ ರಾಷ್ಟ್ರ, ಆಫ್ರಿಕಾ, ಅಫ್ಘಾನಿಸ್ತಾನ, ಚೀನಾ, ಪಾಕಿಸ್ತಾನಗಳಲ್ಲಿ ಕಂಕಣ ಸೂರ್ಯಗ್ರಹಣ ಗೋಚರಿಸಲಿದೆ.








