ಮಂಗಳೂರು: ಮಂಗಳೂರು ಸ್ಮಾರ್ಟ್ ಸಿಟಿ ಎಂಡಿ ಅವರಿಗೆ ಓಡಾಡಲು ಕೆನರಾ ಬ್ಯಾಂಕ್ ವತಿಯಿಂದ ದುಬಾರಿ ಕಾರ್ ಒಂದನ್ನು ಇತ್ತೀಚೆಗೆ ಸ್ಪಾನ್ಸರ್ ಗಿಫ್ಟ್ ನೀಡಲಾಗಿದೆ. ಇದೀಗ ಈ ಗಿಫ್ಟ್ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ಬ್ಯಾಂಕ್ ನ ಈ ನಡೆ ಅನುಮಾನ ಮೂಡಿಸಿದೆ.
ಕೆಲದಿನಗಳ ಹಿಂದೆ ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಕೆನರಾ ಬ್ಯಾಂಕ್ ಅಧಿಕಾರಿಗಳೇ ಕಾರನ್ನು ಸ್ಮಾರ್ಟ್ ಸಿಟಿ ಎಂಡಿ ಮಹಮ್ಮದ್ ನಜೀರ್ ಅವರಿಗೆ ಹಸ್ತಾಂತರ ಮಾಡಿದ್ದಾರೆ.

“ಸ್ಮಾರ್ಟ್ ಸಿಟಿ” ಕೇಂದ್ರ ಸರಕಾರದ ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ಯಾಗಿದೆ. ಕೇಂದ್ರ ದ ಈ ಮಹತ್ವದ ಯೋಜನೆಯ ನಿರ್ವಹಣೆಯ ಜವಾಬ್ದಾರಿಯನ್ನು ಐಎಎಸ್ ದರ್ಜೆಯ ಅಧಿಕಾರಿಗೆ ನೀಡಬೇಕೆಂದು ಪ್ರಧಾನಿ ಮೋದಿ ಸೂಚನೆ ಇದ್ದರೂ, ಮಂಗಳೂರಿನಲ್ಲಿ ಮಾತ್ರ ಕೆಎಎಸ್ ದರ್ಜೆಯೂ ಅಲ್ಲದ ಅಧಿಕಾರಿಯೊಬ್ಬರನ್ನು ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಮಾಡಲಾಗಿದೆ .
ಈ ಹಿಂದೆ ಮಂಗಳೂರು ಮಹಾನಗರ ಪಾಲಿಕೆ ಕಮೀಷನರ್ ಆಗಿದ್ದರು ಎಂಬ ಒಂದೇ ಒಂದು “ಅರ್ಹತೆ” ಆಧಾರದಲ್ಲಿ ಸ್ಮಾರ್ಟ್ ಸಿಟಿ ಎಂಡಿ ಯಾಗಿದ್ದಾರೆ. ಮಂಗಳೂರು ಸ್ಮಾರ್ಟ್ ಸಿಟಿ ಎಂಡಿ ಯವರಿಗೆ ಈಗ ಕೇಂದ್ರ ಸರಕಾರದ ಅಧೀನದಲ್ಲಿರುವ ಬ್ಯಾಂಕಿನಿಂದಲೇ ಕಾರು ಗಿಫ್ಟ್ ನೀಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಬ್ಯಾಂಕ್ ಮೂಲ ಗಳ ಪ್ರಕಾರ ಪ್ರಕಾರ, ಕೆನರಾ ಬ್ಯಾಂಕಿನಲ್ಲಿ ಸ್ಮಾರ್ಟ್ ಸಿಟಿಗೆಂದು ಬಂದಿರುವ 200 ಕೋಟಿ ರೂಪಾಯಿ ಅನುದಾನದ ಹಣವನ್ನು ಎಫ್ ಡಿ ಇಡಲಾಗಿದೆ. ಇಂಥ ದೊಡ್ಡ ಮೊತ್ತದ ಹಣವನ್ನು ಎಫ್ ಡಿ ಮಾಡಿರುವುದಕ್ಕಾಗಿ ಸ್ಮಾರ್ಟ್ ಸಿಟಿ ಎಂಡಿ ಗೆ ಕೆನರಾ ಬ್ಯಾಂಕ್ ಅಧಿಕಾರಿಗಳು ಎರ್ಟಿಕಾ ನ್ಯೂ ಮಾಡೆಲ್ ಕಾರನ್ನು ಸ್ಪಾನ್ಸರ್ ಮಾಡಿದ್ದಾರೆ ಎಂದು ಅನುಮಾನಿಸಲಾಗಿದೆ.
ಒಬ್ಬ ಸರಕಾರಿ ಅಧಿಕಾರಿಗೆ ಯಾವುದೇ ರೀತಿಯಲ್ಲಿ ಸ್ಪಾನ್ಸರ್ ನೀಡುವಂತಿಲ್ಲ. ಸ್ಮಾರ್ಟ್ ಸಿಟಿ ಯೋಜನೆ ಎಂ ಡಿ ದರ್ಜೆಯ ಅಧಿಕಾರಿಗೆ ಕಾರನ್ನು ಸ್ಪಾನ್ಸರ್ ಮಾಡಲಾಗಿದೆ. ಸಾರ್ವಜನಿಕ ರಂಗದ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್ ಕಾನೂನು ಉಲ್ಲಂಘನೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.
ಬ್ಯಾಂಕಿನ ಸಿ ಎಸ್ ಆರ್ ಫಂಡನ್ನು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಾತ್ರ ಹೂಡಿಕೆ ಮಾಡಬಹುದು. ತಪ್ಪಿದಲ್ಲಿ ಸಾರ್ವಜನಿಕರಿಗೆ ಉಪಯೋಗ ಆಗಬಲ್ಲ ರಸ್ತೆ ಡಿವೈಡರ್ ನಿರ್ಮಾಣ, ಪೊಲೀಸ್ ಬ್ಯಾರಿಕೇಡ್, ಪಾರ್ಕ್ ದುರಸ್ತಿ, ಶೌಚಾಲಯ ನಿರ್ಮಾಣ ದಂತಹ ಕೆಲಸಗಳನ್ನು ಮಾತ್ರ ಮಾಡಬಹುದಾಗಿದೆ. ಯಾವುದೇ ಒಬ್ಬ ಅಧಿಕಾರಿಗೆ ಕಾರನ್ನು ಗಿಫ್ಟ್ ಮಾಡುವುದು ಹಲವಾರು ಅನುಮಾನಗಳನ್ನು ಹುಟ್ಟು ಹಾಕುತ್ತದೆ. ಈ ಹಿನ್ನೆಲೆಯಲ್ಲಿ ಈ ಕುರಿತು ತನಿಖೆ ಯಾಗ ಬೇಕೆಂಬ ಒತ್ತಾಯ ಕೇಳಿ ಬಂದಿದೆ.








