ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಪದಗ್ರಹಣದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅನುಮತಿ ನೀಡಿದ್ದಾರೆ. ಕೋವಿಡ್-19 ಮಾರ್ಗಸೂಚಿಯ ಪ್ರಕಾರ ಜೂನ್ 14 ರಂದು ನಡೆಯಬೇಕಾಗಿದ್ದ ಪದಗ್ರಹಣ ಕಾರ್ಯಕ್ರಮಕ್ಕೆ ಅನುಮತಿಯನ್ನು ನಿರಾಕರಣೆ ಮಾಡಲಾಗಿತ್ತು. ಇದೀಗ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕಾರ್ಯಕ್ರಮ ನಡೆಸಲು ಅನುಮತಿ ನೀಡಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಡಿ.ಕೆ.ಶಿವಕುಮಾರ್ ಪದಗ್ರಹಣ ಸಮಾರಂಭಕ್ಕೆ ಸರ್ಕಾರ ಅಡ್ಡಿ ಮಾಡಿಲ್ಲ. ಕರೊನಾ ವೈರಸ್ ಹಿನ್ನೆಲೆಯಲ್ಲಿ ಪದಗ್ರಹಣಕ್ಕೆ ನಿರಾಕರಿಸಲಾಗಿತ್ತು ಎಂದಿದ್ದಾರೆ.
ಡಿಕೆಶಿ ಸಂತಸ
ಈ ಬಗ್ಗೆ ತಮ್ಮ ಟ್ವಿಟ್ಟಿರ್ ಖಾತೆಯಲ್ಲಿ ಡಿ.ಕೆ.ಶಿವಕುಮಾರ್ ಖುಷಿ ಹಂಚಿಕೊಂಡಿದ್ದು, ‘ಪದಗ್ರಹಣ ಕಾರ್ಯಕ್ರಮಕ್ಕೆ ಅನುಮತಿ ನೀಡಿರುವ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು. ಪಕ್ಷದ ಮುಖಂಡರ ಜತೆ ಚರ್ಚೆ ಮಾಡಿದ ನಂತರ ಹೊಸ ದಿನಾಂಕವನ್ನು ನಿಗದಿ ಪಡಿಸಲಾಗುವುದು’ ಎಂದು ತಿಳಿಸಿದ್ದಾರೆ.
ಇನ್ನು ಶಿವಕುಮಾರ್ ಅವರ ಪದಗ್ರಹಣ ಸಮಾರಂಭಕ್ಕೆ ಸರ್ಕಾರ ಎರಡು ಬಾರಿ ಅನುಮತಿ ನಿರಾಕರಣೆ ಮಾಡಿತ್ತು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.








