ಪ್ರೇಕ್ಷಕರಿಲ್ಲದೆ 2020ರ ಐಪಿಎಲ್ ಟೂರ್ನಿ ನಡೆಸುವ ಬಗ್ಗೆ ಬಿಸಿಸಿಐ ಚಿಂತನೆ..!
ನಿನ್ನೆ ನಡೆದಿದ್ದ ಐಸಿಸಿ ಸಭೆಯ ಬಳಿಕ ಬಿಸಿಸಿಐಯು ಐಪಿಎಲ್ ಟೂರ್ನಿಯ ಬಗ್ಗೆ ಸಂಬಂಧಪಟ್ಟ ಸಂಸ್ಥೆಗಳಿಗೆ ಪತ್ರ ಬರೆದಿದೆ. ಹೀಗಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯವರಿಗೆ ಐಪಿಎಲ್ ಟೂರ್ನಿಯನ್ನು ಸಂಘಟಿಸುವ ಬಗ್ಗೆ ವಿಶ್ವಾಸವಿದೆ ಎಂಬಂತಾಗಿದೆ. ಈ ನಡುವೆ ಕೊರೋನಾ ವೈರಸ್ ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಮಾರು ಎಂಟು ಸಾವಿರ ಜನ ಈಗಾಗಲೇ ಸಾವಿಗಿಡಾಗಿದ್ದಾರೆ.
ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಸಂಘಟಿಸುವ ಬಗ್ಗೆ ಎಲ್ಲಾ ಅವಕಾಶಗಳನ್ನು ಎದುರು ನೋಡುತ್ತಿದೆ. ಅಷ್ಟೇ ಅಲ್ಲ ಖಾಲಿ ಮೈದಾನದಲ್ಲಿ ಅಂದ್ರೆ ಮೈದಾನದಲ್ಲಿ ಪ್ರೇಕ್ಷಕರು ಇಲ್ಲದೆ ಟೂರ್ನಿಯನ್ನು ನಡೆಸುವ ಸಾಧ್ಯತೆಯೂ ಇದೆ ಎಂಬುದು ಸಹ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯವರ ಪತ್ರದಲ್ಲಿ ಉಲ್ಲೇಖವಿದೆ.
ಇತ್ತೀಚೆಗೆ ಭಾರತ ಸೇರಿದಂತೆ ವಿದೇಶಿ ಆಟಗಾರರು ಕೂಡ ಐಪಿಎಲ್ ಟೂರ್ನಿಯನ್ನು ನಡೆಸುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಹೀಗಾಗಿ 2020ರ ಐಪಿಎಲ್ ಭವಿಷ್ಯವನ್ನು ಸದ್ಯದಲ್ಲೇ ನಿರ್ಧಾರ ಮಾಡಲಾಗುವುದು ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
ಒಂದು ಮೂಲದ ಪ್ರಕಾರ ಐಪಿಎಲ್ ಟೂರ್ನಿಯು ಅಕ್ಟೋಬರ್ -ನವೆಂಬರ್ ನಲ್ಲಿ ನಡೆಸುವ ಸಾಧ್ಯತೆ ಇದೆ. ಯಾಕಂದ್ರೆ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಐಸಿಸಿ ಮುಂದೂಡುವ ಸಾಧ್ಯತೆ ಇದೆ. ಅಲ್ಲದೆ ಟಿ-ಟ್ವೆಂಟಿ ವಿಶ್ವಕಪ್ ಸಂಘಟಿಸುವ ಬಗ್ಗೆ ಐಸಿಸಿ ಜುಲೈನಲ್ಲಿ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಿದೆ. ಹೀಗಾಗಿ ಟಿ-ಟ್ವೆಂಟಿ ವಿಶ್ವಕಪ್‍ನ ನಿರ್ಧಾರದ ಮೇಲೆ ಐಪಿಎಲ್‍ನ ಭವಿಷ್ಯವೂ ನಿರ್ಧಾರವಾಗಲಿದೆ.
ಅದೇ ರೀತಿ ದೇಸಿ ಕ್ರಿಕೆಟ್‍ನ ಬಗ್ಗೆಯೂ ಬಿಸಿಸಿಐ ಚರ್ಚೆ ನಡೆಸುತ್ತಿದೆ. ರಣಜಿ ಟ್ರೋಫಿ, ದುಲಿಪ್ ಟ್ರೋಪಿ, ವಿಜಯ್ ಹಜಾರೆ ಟ್ರೋಫಿ ಟೂರ್ನಿಗಳ ವೇಳಾಪಟ್ಟಿ ಮತ್ತು ಟೂರ್ನಿಗಳನ್ನು ಯಾವ ರೀತಿ ನಡೆಸಬೇಕು ಎಂಬುದರ ಬಗ್ಗೆಯೂ ಕಾರ್ಯಪ್ರವೃತ್ತವಾಗಿದೆ ಎಂದು ಗಂಗೂಲಿ ತಿಳಿಸಿದ್ದಾರೆ.








