ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಬಿಎಂಟಿಸಿ ಬಸ್ ಕಂಡಕ್ಟರ್ ಗೆ ಕೊರೊನಾ ಪಾಸಿಟಿವ್ ಬಂದಿರುವುದು ನಾಗರಿಕರಲ್ಲಿ ಆತಂಕ ಹುಟ್ಟಿಸಿದೆ. ಕಳೆದ ಮೇ ತಿಂಗಳಿಂದ ಲಾಕ್‍ಡೌನ್ ಸಡಿಲಿಕೆಯಾದ ನಂತರ ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್‍ಗಳ ಸಂಚಾರ ಆರಂಭಿಸಲಾಗಿದೆ. ಬಸ್‍ಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಬರಲಾಗುತ್ತಿದ್ದು, ಯಾವುದೇ ಬಸ್‍ಗಳಲ್ಲೂ ಲಾಕ್‍ಡೌನ್‍ಗೂ ಮೊದಲು ಕಾಣುತ್ತಿದ್ದ ರಶ್, ಓವರ್ ಲೋಡ್ ಇಲ್ಲ. ಆದರೂ ಕಂಡಕ್ಟರ್‍ಗೆ ಹೇಗೆ ಕೊರೊನಾ ಪಾಸಿಟಿವ್ ಬಂತು ಎಂಬುದು ಅಧಿಕಾರಿಗಳ ನಿದ್ದೆಗೆಡಿಸಿದೆ.
ಕರ್ತವ್ಯದಲ್ಲಿ ತೊಡಗಿಕೊಂಡಿದ್ದ ಈ ಕಂಡಕ್ಟರ್ ಗೆ ಯಾವುದೇ ಜ್ವರ, ಶೀತದಂತಹ ಲಕ್ಷಣಗಳು ಇರಲಿಲ್ಲ. ಆದರೆ ಈಗ ಆತನಿಗೆ ಕೊರೊನಾ ಪಾಸಿಟಿವ್ ಬಂದಿರುವುದು ಆತಂಕ ಸೃಷ್ಟಿಸಿದೆ. ಕರ್ತವ್ಯನಿರತಾಗಿದ್ದ ವೇಳೆ ಎಲ್ಲಾ ಸಿಬ್ಬಂದಿಗಳ ಜತೆ ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದರು. ಜೂನ್.10ರಂದು ಆತನ ವೈದ್ಯಕೀಯ ಪರೀಕ್ಷಾ ವರದಿ ಬಂದಿದ್ದು, ಅದರಲ್ಲಿ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಕೊರೊನಾ ಪಾಸಿಸಿವ್ ದೃಢಪಡುತ್ತಿದ್ದಂತೆ ಬಿಎಂಟಿಸಿ ಕಂಟಕ್ಟರ್‍ರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆತಂಕ ಸೃಷ್ಟಿಸಿದ ಟ್ರಾವೆಲ್ ಹಿಸ್ಟರಿ
ಕೊರೊನಾ ಪಾಸಿಟಿವ್ ಎಂದು ದೃಢಪಟ್ಟ ಹಿನ್ನೆಲೆಯಲ್ಲಿ ಬಿಎಂಟಿಸಿ ಕಂಡಕ್ಟರ್ ಟ್ರಾವೆಲ್ ಹಿಸ್ಟರಿ ಪಡೆದು ಆತನ ಸಂಪರ್ಕ ಹೊಂದಿದ್ದವರ ಪತ್ತೆ ಹಚ್ಚುವ ಕಾರ್ಯ ಪ್ರಾರಂಭಿಸಲಾಗಿದೆ. ಆತನ ಕೆಲಸ ಮಾಡಿದ ಸ್ಥಳಗಳನ್ನು ಸ್ಯಾನಿಟೈಸ್ ಮಾಡಿ ಸ್ವಚ್ಛಗೊಳಿಸಲಾಗಿದೆ.
ಜೊತೆಗೆ ಆತ ಇತ್ತೀಚೆಗೆ ಹುಟ್ಟೂರು ವಿಜಯಪುರಕ್ಕೆ ಹೋಗಿ ವಾಪಸ್ಸಾಗಿದ್ದು, ಆತನ ಸಂಪರ್ಕದಲ್ಲಿದ್ದವರ ಪತ್ತೆ ಕಾರ್ಯ ನಡೆಯುತ್ತಿದೆ. ಜತೆಗೆ ಆತ ಕರ್ತವ್ಯದ ವೇಳೆ ಬಿಎಂಟಿಸಿ ಬಸ್‍ನಲ್ಲಿ ಪ್ರಯಾಣಿಕರೂ ಸೋಂಕು ಹರಡಿದೆಯಾ ಇಲ್ಲವಾ ಅನ್ನೋದೆ ಈಗ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.








