ಬೆಂಗಳೂರು: ರಾಜ್ಯ ಸರ್ಕಾರ ಒಂದರಿಂದ 7ನೇ ತರಗತಿಯವರೆಗಿನ ಆನ್ ಲೈನ್ ಶಿಕ್ಷಣವನ್ನು ರದ್ದುಗೊಳಿಸುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಬಗ್ಗೆ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಸಂಪುಟದಲ್ಲಿ ಆನ್ ಲೈನ್ ತರಗತಿಯ ಬಗ್ಗೆ ಚರ್ಚೆ ನಡೆಯಿತು. 7ನೇ ತರಗತಿಯವರೆಗಿನ ಆನ್ ಲೈನ್ ಶಿಕ್ಷಣವನ್ನು ರದ್ದು ಮಾಡುವಂತೆ ಸಚಿವರು ಒತ್ತಾಯಿಸಿದರು. ಹೀಗಾಗಿ ಎಲ್ಲ ಮಾದರಿಯ ಪಠ್ಯ ಬೋಧಿಸುತ್ತಿರುವ ಶಾಲೆಗಳಲ್ಲಿ ನಡೆಯುತ್ತಿರುವ 7ನೇ ತರಗತಿವರೆಗೆ ಆನ್ಲೈನ್ ಶಿಕ್ಷಣವನ್ನು ರದ್ದು ಮಾಡಲಾಗಿದೆ ಎಂದು ತಿಳಿಸಿದರು.
ಸಾಕಷ್ಟು ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿದ್ದು, ಅವರಿಗೆ ಅನಾನುಕೂಲವಾಗುವ ಕಾರಣಕ್ಕೆ 6 ಮತ್ತು 7 ತರಗತಿಗಳಿಗೆ ಆನ್ ಲೈನ್ ಶಿಕ್ಷಣ ಬೇಡ ಎಂದು ಸಂಪುಟ ಒಮ್ಮತದ ತೀರ್ಮಾನ ಮಾಡಿತು. ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕಾಗಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. 8ನೇ ತರಗತಿ ಹಾಗೂ 9ನೇ ತರಗತಿ ಆನ್ ಲೈನ್ ಕ್ಲಾಸ್ ನಡೆಯುತ್ತಿದೆ. ಇದನ್ನೂ ನಿಲ್ಲಿಸಬೇಕೇ ಅಥವಾ ಬೇಡವೇ ಎನ್ನುವುದರ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.
ಇನ್ನು ನಿನ್ನೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸಭೆ ನಡೆಸಿದ್ದರು. ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ 1 ರಿಂದ 5ನೇ ತರಗತಿಯವರೆಗಿನ ಮಕ್ಕಳ ಆನ್ಲೈನ್ ಶಿಕ್ಷಣವನ್ನು ರದ್ದು ಮಾಡಲಾಗಿದೆ ಎಂದು ತಿಳಿಸಿದ್ದರು.