ಅಯೋಧ್ಯೆ- ರಾಮಮಂದಿರ ನಿರ್ಮಾಣದ ಅಡಿಗಲ್ಲು ಕಾರ್ಯಕ್ರಮ ಮುಂದೂಡಿಕೆ

ಅಯೋಧ್ಯೆ, ಜೂ.11: ಜೂನ್ 10 ರಂದು ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕುವ ಕಾರ್ಯಕ್ರಮ ನಡೆದಿಲ್ಲ. ಅದರ ಬದಲಾಗಿ ಯಾವುದೇ ವಿಘ್ನಗಳಿಲ್ಲದೇ ಮಂದಿರ ನಿರ್ಮಾಣ ಕಾರ್ಯ ನಡೆಯಲಿ ಎಂದು ಪ್ರಾರ್ಥಿಸಿ ರುದ್ರಾಭಿಷೇಕ ನೆರವೇರಿಸಲಾಯಿತು. ಈ ಮೊದಲು ಜೂನ್ 10 ರಂದು ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡಿಪಾಯ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ ಅಂದು ರಾಮಮಂದಿರಕ್ಕೆ ಅಡಿಗಲ್ಲು ಹಾಕುವ ಕಾರ್ಯಕ್ರಮವನ್ನು ಮುಂದೂಡಲಾಯಿತು.
ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿರುವ ಕುಬೇರ್ ತಿಲಾ ದೇವಾಲಯದಲ್ಲಿ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯಗೋಪಾಲ ದಾಸ್ ಅವರ ವಕ್ತಾರರಾದ ಮಹಾಂತ ಕಮಲ ನಯನ ದಾಸ್ ಅವರ ನೇತೃತ್ವದ ಪುರೋಹಿತರ ತಂಡ ರುದ್ರಾಭಿಷೇಕ ನೆರವೇರಿಸಿತು. ನಂತರ ಮಾತಾನಾಡಿದ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯಗೋಪಾಲ ದಾಸ್ ಅವರ ವಕ್ತಾರರಾದ ಮಹಾಂತ ಕಮಲ ನಯನ ದಾಸ್ ರಾಮಮಂದಿರ ನಿರ್ಮಾಣದ ಶೀಘ್ರ ಆರಂಭಕ್ಕಾಗಿ ಪ್ರಾರ್ಥನೆ ನಡೆಸಿದೆವು ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಡಿಗಲ್ಲು ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಲಾಗಿದ್ದರೂ ಅವರು ಕೊರೊನಾ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ. ಅವರನ್ನು ಇನ್ನೊಮ್ಮೆ ಭೇಟಿಯಾಗಿ ಅಡಿಗಲ್ಲು ಇಡುವ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನ ನೀಡಲಾಗುವುದು ಎಂದು ತಿಳಿಸಿದ ಟ್ರಸ್ಟ್ ಈ ಮೂಲಕ ಕೊರೋನಾ ಬಿಕ್ಕಟ್ಟು ಮುಗಿದ ಬಳಿಕ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸುವ ಸುಳಿವು ನೀಡಿತು.
ವರದಿಗಳ ಮುಖಾಂತರ ಜುಲೈ 2ರಂದು ದೇವಶಯನಿ ಏಕಾದಶಿಯ ಪವಿತ್ರ ದಿನವಿದ್ದು, ಅಂದು ಕಾರ್ಯಕ್ರಮವನ್ನು ಆಯೋಜಿಸಲು ಟ್ರಸ್ಟ್ ನಿರ್ಧರಿಸಿದೆ. ಈ ಕುರಿತಾಗಿ ಪ್ರಧಾನಿ ಕಾರ್ಯಾಲಯಕ್ಕೂ ಮಾಹಿತಿ ನೀಡಲಾಗಿದ್ದು, ಒಪ್ಪಿಗೆಗಾಗಿ ಕಾಯುತ್ತಿದೆ .








