ಪಾಕಿಸ್ತಾನದಲ್ಲಿ ಮತ್ತೊಮ್ಮೆ ಕಟ್ಟುನಿಟ್ಟಿನ ಲಾಕ್ ಡೌನ್ ಹೇರಲು ವಿಶ್ವ ಆರೋಗ್ಯ ಸಂಸ್ಥೆ ಸೂಚನೆ

ಜಿನೀವಾ, ಜೂನ್ 12: ಪಾಕಿಸ್ತಾನದಲ್ಲಿ ಕೊರೊನಾ ಸೋಂಕು ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆ ಕಾಣುತ್ತಿರುವ ಹಿನ್ನಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕಟ್ಟುನಿಟ್ಟಿನ ಲಾಕ್ ಡೌನ್ ಅನ್ನು ಮತ್ತೊಮ್ಮೆ ಹೇರಲು ಪಾಕಿಸ್ತಾನಕ್ಕೆ ಸೂಚಿಸಿದೆ.
ಕಳೆದ ತಿಂಗಳು ಲಾಕ್ ಡೌನ್ ಅನ್ನು ತೆರವುಗೊಳಿಸಿದ ಸಂದರ್ಭದಲ್ಲಿ ಪಾಕಿಸ್ತಾನ ವಿಶ್ವ ಸಂಸ್ಥೆಯ ಆರು ತಾಂತ್ರಿಕ ಮಾನದಂಡಗಳಲ್ಲಿ ಯಾವುದನ್ನೂ ಸಹ ಪಾಕಿಸ್ತಾನ ಪೂರೈಸಿಲ್ಲ ಎಂದಿದೆ. ಲಾಕ್ ಡೌನ್ ತೆರವುಗೊಳಿಸಿದ ಬಳಿಕ ಪಾಕಿಸ್ತಾನದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ನಿಯಂತ್ರಿಸಲು ಸಾಧ್ಯವಾಗದ ಪರಿಸ್ಥಿತಿ ತಲುಪಿದೆ. ದೇಶದಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಈ ಮೊದಲೇ ಆರೋಗ್ಯ ತಜ್ಞರು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರಕ್ಕೆ ಕಟ್ಟುನಿಟ್ಟಿನ ಲಾಕ್ ಡೌನ್ ಹೇರಲು ಶಿಫಾರಸ್ಸು ಮಾಡಿದ್ದರು. ಆದರೆ ಲಾಕ್ ಡೌನ್ ನಿಂದ ದೇಶದಲ್ಲಿ ಅರ್ಥಿಕ ಬಿಕ್ಕಟ್ಟು ಹದಗೆಡುವ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಆರೋಗ್ಯ ತಜ್ಞರ ಸಲಹೆಗಳನ್ನು ತಿರಸ್ಕರಿಸಿದ್ದರು ಮತ್ತು ಜನರಲ್ಲಿ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವಂತೆ ಸೂಚಿಸಿದ್ದರು.
ಇದೀಗ ಪಾಕಿಸ್ತಾನದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡು ಬಂದಿದ್ದು, ದಿನವೊಂದಕ್ಕೆ 5 ರಿಂದ 6 ಸಾವಿರ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದೆ. ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದ ಸಮಯದಲ್ಲಿ ದೇಶದಾದ್ಯಂತ ದಿನವೊಂದಕ್ಕೆ ಸಾವಿರದಿಂದ ಎರಡು ಸಾವಿರ ಪ್ರಕರಣಗಳು ದಾಖಲಾಗುತ್ತಿದ್ದವು. ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ಸರ್ಕಾರವು ಈದ್ ಹಬ್ಬದ ಮೊದಲು ಲಾಕ್ ಡೌನ್ ಸಡಿಲಿಕೆ ಮಾಡಿತು. ನಂತರ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪಾಕಿಸ್ತಾನ ಮುಖ್ಯಸ್ಥ ಪಲಿತಾ ಮಹಿಪಾಲ ಅವರು ಸರ್ಕಾರಕ್ಕೆ ಪತ್ರ ಕಳುಹಿಸಿದ್ದು, ಲಾಕ್‌ಡೌನ್ ಅನ್ನು ತೆರವುಗೊಳಿಸಲು ಪಾಕಿಸ್ತಾನ ವಿಶ್ವಸಂಸ್ಥೆಯ ಆರು ತಾಂತ್ರಿಕ ಮಾನದಂಡಗಳಲ್ಲಿ ಯಾವುದನ್ನೂ ಸಹ ಪೂರೈಸಿಲ್ಲ ಎಂದು ತಿಳಿಸಿದ್ದಾರೆ. ಪಾಕಿಸ್ತಾನದಲ್ಲಿ ಇಲ್ಲಿಯವರೆಗೆ 1,13,702 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 2,312 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಸರ್ಕಾರ ತಿಳಿಸಿದೆ.








