ಕೊರೋನಾ ಲಸಿಕೆಗೆ ಸಂಬಂಧಿಸಿ ಗುಡ್ ನ್ಯೂಸ್ ಕೊಟ್ಟ ಜಾನ್ಸನ್ ಆಂಡ್ ಜಾನ್ಸನ್
ವಾಷಿಂಗ್ಟನ್, ಜೂನ್ 12: ಅಮೆರಿಕಾದ ಪ್ರತಿಷ್ಠಿತ ಔಷಧ ಉತ್ಪಾದನಾ ಸಂಸ್ಥೆಯಾದ ಜಾನ್ಸನ್ ಆಂಡ್ ಜಾನ್ಸನ್ ಸಂಸ್ಥೆಯು ವಿಶ್ವವನ್ನು ಕಾಡುತ್ತಿರುವ ಕೊರೊನಾ ವೈರಸ್ ಸೋಂಕಿನ ಹೆಮ್ಮಾರಿಗೆ ಲಸಿಕೆಗಳನ್ನು ಅಭಿವೃದ್ಧಿ ಪಡಿಸುವ ಕೆಲಸವು ವೇಗವಾಗಿ ಸಾಗುತ್ತಿರುವುದಾಗಿ ಗುಡ್ ನ್ಯೂಸ್ ಕೊಟ್ಟಿದೆ.
ಜಾನ್ಸನ್ ಆಂಡ್ ಜಾನ್ಸನ್ ಸಂಸ್ಥೆಯು ತಾನು ಅಭಿವೃದ್ಧಿ ಪಡಿಸಿರುವ ಕೋವಿಡ್-19 ಲಸಿಕೆಯನ್ನು ಮಾನವನ ಮೇಲೆ ಜುಲೈ ತಿಂಗಳ ಮಧ್ಯದಲ್ಲಿ ಪ್ರಯೋಗಿಸಲಾಗುವುದು ಎಂದು ತಿಳಿಸಿದೆ. ಈ ಮೊದಲು ಸೆಪ್ಟೆಂಬರ್ ಸಮಯದಲ್ಲಿ ಲಸಿಕೆಯನ್ನು ಮಾನವನ ಮೇಲೆ ಪ್ರಯೋಗಿಸಲಾಗುವುದು ಎಂದಿದ್ದ ಜಾನ್ಸನ್ ಆಂಡ್ ಜಾನ್ಸನ್ ಸಂಸ್ಥೆಯು ಇದೀಗ ತಾನು ಊಹಿಸಿದ್ದ ಅವಧಿಗಿಂತ ಎರಡು ತಿಂಗಳು ಮೊದಲೇ ಮಾನವನ ಮೇಲೆ ಪ್ರಯೋಗಿಸಲಾಗುವುದು ಎಂದು ತಿಳಿಸಿದೆ.
ಜುಲೈ ತಿಂಗಳ ಮಧ್ಯ ಭಾಗದಲ್ಲಿ ಜಾನ್ಸನ್ ಆಂಡ್ ಜಾನ್ಸನ್ ಸಂಸ್ಥೆಯು 18 ವರ್ಷದಿಂದ 55 ವರ್ಷದ ಒಳಗಿನ ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟು ವಯಸ್ಸಾದ ಸುಮಾರು 1,045 ಅರೋಗ್ಯವಂತ ಜನರ ಮೇಲೆ ಲಸಿಕೆಯನ್ನು ಪ್ರಯೋಗಿಸಲು ಸಿದ್ಧತೆ ನಡೆಸಿದೆ.
ಈಗಾಗಲೇ ಜಾನ್ಸನ್ ಆಂಡ್ ಜಾನ್ಸನ್ ಸಂಸ್ಥೆಯು ಅಮೆರಿಕಾ ಸರ್ಕಾರದೊಂದಿಗೆ 2021ರ ವೇಳೆಗೆ 1 ಬಿಲಿಯನ್ ಡೋಸ್ ಲಸಿಕೆಗಳನ್ನು ಉತ್ಪಾದಿಸುವಷ್ಟು ಉತ್ಪಾದನಾ ಸಾಮರ್ಥ್ಯವನ್ನು ಸೃಷ್ಟಿಸಲು ಒಪ್ಪಂದವನ್ನೂ ಮಾಡಿಕೊಂಡಿದೆ.