ಬೆಂಗಳೂರು: ಪಾಕ್ ಪರ ಘೋಷಣೆ ಕೂಗಿ ಬಂಧನಕ್ಕೊಳಗಾಗಿದ್ದ ವಿದ್ಯಾರ್ಥಿನಿ ಅಮೂಲ್ಯ ಲಿಯೋನಾಗೆ ಷರತ್ತುಬದ್ಧ ಜಾಮೀನು ಸಿಕ್ಕಿದೆ. ಕಳೆದ ನಾಲ್ಕು ತಿಂಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಅಮೂಲ್ಯಗೆ ಇಂದು ಬಿಡುಗಡೆ ಭಾಗ್ಯ ಸಿಕ್ಕಿದೆ.
ಕಳೆದ ಫೆಬ್ರವರಿ 20ರಂದು ಬೆಂಗಳೂರಿನ ಫ್ರೀಡಂಪಾರ್ಕ್‍ನಲ್ಲಿ ಆಯೋಜಿಸಿದ್ದ ಸಿಎಎ, ಎನ್‍ಆರ್‍ಸಿ ವಿರೋಧಿ ಸಭೆಯಲ್ಲಿ ಅಮೂಲ್ಯ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಳು. ಸಭೆಯಲ್ಲಿ ಪಾಲ್ಗೊಂಡಿದ್ದ ಎಂಐಎಂ ಪಕ್ಷದ ಸಂಸದ ಅಸಾದುದ್ದೀನ್ ಒವೈಸಿ ಸೇರಿದಂತೆ ಆಯೋಜಕರು ಶಾಕ್ ಆಗಿದ್ದರು. ಖುದ್ದು ಓವೈಸಿ ಅವರೇ ಅಮೂಲ್ಯ ಕೈಯಲಿದ್ದ ಮೈಕ್ ಕಸಿದುಕೊಂಡು ವೇದಿಕೆಯಿಂದ ಕೆಳಗೆ ಇಳಿಸಿದ್ದರು. ಸ್ಥಳದಲ್ಲೇ ಇದ್ದ ಪೊಲೀಸರು ಅಮೂಲ್ಯಗಳನ್ನು ಬಂಧಿಸಿ ದೇಶದ್ರೋಹದ ಪ್ರಕರಣ ದಾಖಲಿಸಿದ್ದರು.
ಎರಡು ದಿನಗಳ ಹಿಂದಷ್ಟೇ ಬೆಂಗಳೂರಿನ ಹೆಚ್ಚುವರಿ ಸಿಟಿಸಿವಿಲ್ ಕೋರ್ಟ್‍ನ ನ್ಯಾಯಾಧೀಶರು ಜಾಮೀನು ನೀಡಲು ನಿರಾಕರಿಸಿದ್ದರು. ಒಂದು ವೇಳೆ ಜಾಮೀನು ನೀಡಿದರೆ ಆಕೆ ತಲೆಮರೆಸಿಕೊಳ್ಳುವ ಸಾಧ್ಯತೆ ಇದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಅಪಾಯವಿದೆ ಎಂದು ತಿಳಿಸಿದ್ದರು.
ಬಳಿಕ ಅಮೂಲ್ಯ ಪರ ವಕೀಲರು ಮತ್ತೆ ಸಿಸಿ ಸಿವಿಲ್ ಕೋರ್ಟ್‍ಗೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಅಮೂಲ್ಯಗೆ ಷರತ್ತುಬದ್ಧ ಜಾಮೀನು ನೀಡಿದೆ.