BAN va IND : ಟೆಸ್ಟ್ ಸರಣಿಗೆ ಬಾಂಗ್ಲಾ ತಂಡ ಪ್ರಕಟ
ತವರಿನಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಏಕದಿನ ಸರಣಿ ಗೆಲುವಿನ ಸಂಭ್ರಮದಲ್ಲಿರುವ ಬಾಂಗ್ಲಾದೇಶ, ಟೀಂ ಇಂಡಿಯಾ ವಿರುದ್ಧ ಟೆಸ್ಟ್ ಸರಣಿಗೆ 17 ಆಟಗಾರರ ತಂಡವನ್ನ ಪ್ರಕಟಿಸಿದೆ.
ಬಾಂಗ್ಲಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮುಶ್ಫಿಕರ್ ರಹೀಮ್, ಯಾಸಿರ್ ಅಲಿ ಹಾಗೂ ತಸ್ಕಿನ್ ಅಹ್ಮದ್ ಅವರು ಟೆಸ್ಟ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದು, ಯುವ ಆಟಗಾರ ಝಾಕಿರ್ ಹಸನ್ ಮೊದಲ ಬಾರಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅತಿಥೇಯ ಬಾಂಗ್ಲಾದೇಶ ಹಾಗೂ ಭಾರತ ನಡುವಿನ ಟೆಸ್ಟ್ ಸರಣಿ ಡಿ.14 ರಿಂದ ಆರಂಭಗೊಳ್ಳಲಿದ್ದು, ಮೊದಲ ಪಂದ್ಯ ಚಿತಗಾಂಗ್‌ನಲ್ಲಿ ನಡೆಯಲಿದೆ.
ಝಾಕಿರ್ ಹಸನ್ ಅತ್ಯಂತ ಪ್ರತಿಭಾನ್ವಿತ ಆಟಗಾರನಾಗಿದ್ದು, ಅತ್ಯುತ್ತಮ ಫಾರ್ಮ್‌ನಲ್ಲಿರುವ ಯುವ ಆಟಗಾರ ಈ ಆವೃತ್ತಿಯ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ಗಳಿಸಿದ್ದಾನೆ. ಕಳೆದ ವಾರ ನಡೆದ ಭಾರತ ಎ ತಂಡದ ವಿರುದ್ಧದ ಪಂದ್ಯದಲ್ಲೂ ಈತ ಉತ್ತಮ ಪ್ರದರ್ಶನ ನೀಡಿದ್ದು, ಹೀಗಾಗಿ ಈತನನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ಬಾಂಗ್ಲಾದೇಶ ತಂಡದ ಚೀಫ್ ಸೆಲೆಕ್ಟರ್ ಮಿನ್ಹಾಜುಲ್ ಅಬೆದಿನ್ ತಿಳಿಸಿದ್ದಾರೆ.
ಉಳಿದಂತೆ ಕಳೆದ ಜೂನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಬಳಿಕ ಮುಶ್ಫಿಕರ್ ರಹೀಮ್, ಯಾಸಿರ್ ಅಲಿ ಹಾಗೂ ತಸ್ಕಿನ್ ಅಹ್ಮದ್ ಅವರು ಟೆಸ್ಟ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಮುಶ್ಫಿಕರ್ ರಹೀಮ್ ಹಜ್ ಯಾತ್ರೆ ಹಿನ್ನೆಲೆಯಲ್ಲಿ ತಂಡದ ಹೊರಗುಳಿದಿದ್ದರೆ. ಯಾಸಿರ್ ಅಲಿ ಹಾಗೂ ಟಸ್ಕಿನ್ ಅಹ್ಮದ್ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದರು.
ಇನ್ನೂ ಗಾಯದ ಸಮಸ್ಯೆಯಿಂದ ODI ಸರಣಿಯಿಂದ ಹೊರಗುಳಿದಿರುವ ತಮೀಮ್ ಇಕ್ಬಾಲ್ ಸಂಪೂರ್ಣ ಗುಣಮುಖವಾಗದ ಹಿನ್ನೆಲೆಯಲ್ಲಿ ಮೊದಲ ಟೆಸ್ಟ್‌ಗೆ ಅಲಭ್ಯರಾಗಿದ್ದಾರೆ. ಉಳಿದಂತೆ ಮೊಸೆದ್ದಿಕ್ ಹೊಸೈನ್, ಮುಸ್ತಫಿಜು಼ರ್ ರಹಮಾನ್ ಅವರುಗಳು ಟೆಸ್ಟ್ ತಂಡದಿಂದ ಹೊರಗುಳಿದಿದ್ದಾರೆ.
ಬಾಂಗ್ಲಾದೇಶ ಟೆಸ್ಟ್ ತಂಡ:
ಮಹ್ಮುದುಲ್ ಹಸನ್ ಜಾಯ್, ನಜ್ಮುಲ್ ಶಾಂಟೊ, ಮೊಮಿನುಲ್ ಹಕ್, ಯಾಸಿರ್ ಅಲಿ ಚೌಧರಿ, ಮುಶ್ಫಿಕರ್ ರಹೀಮ್, ಶಾಕಿಬ್ ಅಲ್ ಹಸನ್(ನಾಯಕ), ಲಿಟನ್ ದಾಸ್, ನೂರುಲ್ ಹಸನ್, ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ತಸ್ಕಿನ್ ಅಹ್ಮದ್, ಸೈಯದ್ ಖಲೀದ್ ಅಹ್ಮದ್, ಎಬ್ದೂತ್ ಹೊಸೈನ್, ಶೊರಿಫುಲ್ ಇಸ್ಲಾಮ್, ಝಾಕಿರ್ ಹಸನ್, ರೆಜೌರ್ ರೆಹಮಾನ್ ರಾಜಾ, ಅನಾಮುಲ್ ಹಕ್.
BAN va IND test cricket , india , bangladesh , saakshatv








