Rapid Road: ಬೆಂಗಳೂರಿನಲ್ಲಿ ಪ್ರಯೋಗಿಕವಾಗಿ ರ‍್ಯಾಪಿಡ್ ರಸ್ತೆ ಉದ್ಘಾಟಿಸಿದ ಸಿಎಂ..
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇಂದಿರಾನಗರದ ಹಳೇ ಮದ್ರಾಸ್ ರಸ್ತೆಯಲ್ಲಿ ನಿರ್ಮಿಸಿರುವ ಪ್ರಾಯೋಗಿಕ ರ‍್ಯಾಪಿಡ್ ರಸ್ತೆ (Rapid Road) ಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಉದ್ಘಾಟಿಸಿದರು.
ಬಳಿಕ ಮುಖ್ಯಮಂತ್ರಿಗಳು ಮಾತನಾಡಿ “ಪ್ರಿ ಕಾಸ್ಟ್ ತಂತ್ರಜ್ಞಾನ ಬಳಸಿ ನಿರ್ಮಾಣವಾಗುವ ರ‍್ಯಾಪಿಡ್ ರಸ್ತೆಗಳನ್ನು ಗುಣಮಟ್ಟ, ದರ, ಹಾಗೂ ಸಾಮರ್ಥ್ಯವನ್ನು ಪರಿಶೀಲಿಸಿದ ನಂತರ ಪರಿಗಣಿಸಲಾಗುವುದು. ಉತ್ತಮ ರಸ್ತೆ ಗಳ ಜೊತೆಗೆ ವೆಚ್ಚವೂ ಕಡಿಮೆ ಇರುವುದು ಮುಖ್ಯ. ಈ ಕುರಿತು ವರದಿಗಳು ಬಂದ ನಂತರ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಬೆಂಗಳೂರಿನ ರಸ್ತೆ ನಿರ್ಮಾಣ ಮಾಡುವ ಸಂದರ್ಭಗಳಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ವೈಟ್ ಟಾಪಿಂಗ್ ಗೆ ಹೆಚ್ಚು ಸಮಯ ತಗುಲುತ್ತದೆ. ಒಂದು ಬಾರಿ ವೈಟ್ ಟಾಪಿಂಗ್ ನಂತರ ಸಮಸ್ಯೆ ಉಂಟಾದಲ್ಲಿ ಪುನಃ ಅದನ್ನು ತೆಗೆಯುವುದು ಕಷ್ಟದ ಕೆಲಸ. ಅದಕ್ಕೆಂದೇ ರ‍್ಯಾಪಿಡ್ ರಸ್ತೆ ತಂತ್ರಜ್ಞಾನ ಬಳಸಲಾಗಿದೆ. ಅಂತಿಮವಾಗಿ ಕಾಮಗಾರಿ ಕ್ಷಿಪ್ರ, ಗುಣಮಟ್ಟ, ಹಾಗೂ ಕಡಿಮೆ ವೆಚ್ಚದ್ದಾಗಿರಬೇಕು ಎಂದು ತಿಳಿಸಿದರು.
ಪ್ರಾಯೋಗಿಕವಾಗಿ ಈ ಯೋಜನೆ ಅನುಷ್ಠಾನಗೊಂಡಿದ್ದು, ಕಡಿಮೆ ವೆಚ್ಚದಲ್ಲಿ ಬೆಂಗಳೂರಿನಲ್ಲಿ ವೈಟ್ ಟಾಪಿಂಗ್ ಅನ್ನು ಸಂಚಾರ ದಟ್ಟಣೆಯುಳ್ಳ, ಕ್ಷಿಪ್ರವಾಗಿ ರಸ್ತೆಯಾಗಬೇಕಿರುವ ಸ್ಥಳಗಳಲ್ಲಿ ಇದನ್ನು ಅಳವಡಿಸಬಹುದಾಗಿದೆ. ಎಸ್.ಆರ್.ದರಗಳಿಗೆ ಹೊಂದುವಂತಿದ್ದರೆ ಮಾತ್ರ ಇದನ್ನು ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
Rapid Road: CM inaugurated Rapid Road in Bangalore on an experimental basis..








