Mahakarnataka border : ಮಹಾರಾಷ್ಟ್ರದ ಗ್ರಾಮಗಳನ್ನು ಮಾರಲು ಬಿಜೆಪಿ ಸಂಚು – ಉದ್ಧವ್ ಠಾಕ್ರೆ ಆರೋಪ
ಕರ್ನಾಟಕ ಚುನಾವಣೆ ಗೆಲ್ಲಲು ಮಹಾರಾಷ್ಟ್ರದ ಗ್ರಾಮಗಳನ್ನು ಮಾರಲು ಬಿಜೆಪಿ ಸಂಚು ಮಾಡುತ್ತಿದೆ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಗಂಭೀರ ಆರೋಪ ಮಾಡಿದ್ದಾರೆ.
ಮಹಾರಾಷ್ಟ್ರವನ್ನು ಅಸ್ಥಿರಗೊಳಿಸುವ ಸಂಚನ್ನು ಬಿಜೆಪಿ ನಡೆಸುತ್ತಿದ್ದು, ಮಹಾರಾಷ್ಟ್ರದಿಂದ ಗುಜರಾತ್‌ಗೆ ದೊಡ್ಡ ಮೊತ್ತದ ಯೋಜನೆಗಳನ್ನು ಸ್ಥಳಾಂತರಿಸಿದಂತೆಯೇ, ಚುನಾವಣೆ ನಡೆಯುವ ಕರ್ನಾಟಕದಲ್ಲಿ ರಾಜ್ಯದ ಗ್ರಾಮಗಳನ್ನು ವಿಲೀನಗೊಳಿಸಬಹುದು ಎಂದು ಹೇಳಿದ್ದಾರೆ.
ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಬಗ್ಗೆ, ತಮ್ಮ ಪಕ್ಷದ ಮುಖವಾಣಿ ‘ಸಾಮ್ನಾ‘ ಪತ್ರಿಕೆಯ ಸಂಪಾದಕೀಯದಲ್ಲಿ ಬರೆದಿರುವ ಮಹಾರಾಷ್ಟ್ರದ ಮಾಜಿ ಸಿಎಂ, ಮಹಾರಾಷ್ಟ್ರದ ಅಭಿವೃದ್ಧಿ ಯೋಜನೆಗಳನ್ನೆಲ್ಲಾ ಕಸಿದು ಗುಜರಾತ್‌ಗೆ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕ ಕಾಲದಲ್ಲಿ ಗುಜರಾತ್‌ನ ಸ್ಥಿತಿಗತಿ ಹಾಗೂ ಮೊರ್ಬಿ ಸೇತುವೆ ದುರಂತದ ನಡುವೆಯೂ ಈ ಫಲಿತಾಂಶ ಬಂದಿರುವುದು ಆಶ್ಚರ್ಯವನ್ನುಂಟು ಮಾಡಿಲ್ಲ ಎಂದು ಅವರು ಬರೆದಿದ್ದಾರೆ.
ಸರ್ದಾರ್ ಪಟೇಲರ ಮೂರ್ತಿ, ಪ್ರಧಾನಿ ಮೋದಿಯವರ ಗುಜರಾತ್ ಅಸ್ಮಿತೆ, ಇವೆಲ್ಲಾ ಕಾರಣಗಳಿಂದ ಗುಜರಾತ್‌ನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ ಎಂದಿರುವ ಉದ್ಧವ್ ಠಾಕ್ರೆ, ಹಲವು ಜಾಗತಿಕ ಸಮಾವೇಶಗಳು ಗುಜರಾತ್‌ನಲ್ಲಿ ನಡೆದವು. ಜಾಗತಿಕ ನಾಯಕರು ಸಬರಮತಿ ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಪ್ರಧಾನಿ ಮೋದಿಯವರಿಂದಾಗಿ ಇವೆಲ್ಲಾ ಆಗಿದೆ. ಹಲವು ಬೃಹತ್ ಅಭಿವೃದ್ಧಿ ಯೋಜನೆಗಳನ್ನು ಮಹಾರಾಷ್ಟ್ರದಿಂದ ಕಸಿದು ಗುಜರಾತ್‌ಗೆ ಕೊಟ್ಟಿದ್ದಾರೆ ಎಂದು ಪತ್ರಿಕೆಯ ಸಂಪಾದಕೀಯದಲ್ಲಿ ಬರೆದಿದ್ದಾರೆ.








