ಬೆಂಗಳೂರು : ರೋಷನ್ ಬೇಗ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾಜಿ ಸಚಿವ ಎಂ.ಬಿ ಪಾಟೀಲ್ ಅವರು ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಗೆ ಬರ್ತೇವೆ ಅಂದವರನ್ನೆಲ್ಲ ಕರೆದುಕೊಳ್ಳೋಕೆ ಆಗಲ್ಲ. ಅದಕ್ಕೆ ಅಂತಾನೇ ಒಂದು ಕಮಿಟಿ ಇದೆ. ಬ್ಲಾಂಕೆಟ್ ಆಗಿ ನಾವು ಯಾವುದನ್ನೂ ತೆಗೆದುಕೊಳ್ಳಲ್ಲ, ಬರುವವರಿಂದ ನಮಗೆ ಹಾನಿಯಾಗಬಾರದು. ಹೋಗುವಾಗ ಏನು ಹಾನಿ ಮಾಡಿದ್ದಾರೆ ನೋಡಬೇಕಾಗುತ್ತದೆ. ಇದೆಲ್ಲಾ ನೋಡಿ ತೀರ್ಮಾನ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ರೋಷನ್ ಬೇಗ್ ಅವರು ಬರ್ತಾರೋ ಇಲ್ವೋ ಗೊತ್ತಿಲ್ಲ. ನಮ್ಮ ನಾಯಕರ ಜೊತೆ ಚರ್ಚೆ ಮಾಡಿರಬಹುದೇನೋ. ಪಕ್ಷದ ಚೌಕಟ್ಟಿನಲ್ಲಿ ಮೊದಲು ಚರ್ಚೆ ಮಾಡಬೇಕು. ಆ ನಂತರ ಸಿದ್ದರಾಮಯ್ಯ, ಮಲ್ಲಿಕಾರ್ಜುನ್ ಖರ್ಗೆ, ಡಿಕೆ ಶಿವಕುಮಾರ್ ನಿರ್ಧಾರ ಮಾಡ್ತಾರೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಇದೇ ವೇಳೆ ಕೊರೊನಾ ಲಾಕ್ ಡೌನ್ ಬಗ್ಗೆ ಮಾತನಾಡಿದ ಎಂ.ಬಿ.ಪಾಟೀಲ್, ಪ್ರಧಾನಿ ಮೋದಿ ಏಕಾಏಕಿ ಲಾಕ್ ಡೌನ್ ಘೋಷಿಸಿದರು. ಇದ್ರಿಂದ ಸಾಕಷ್ಟು ಸಮಸ್ಯೆಗಳಾಯ್ತು. ರೆಸ್ಟೋರೆಂಟ್ ಗಳಲ್ಲಿ ನಾರ್ಥ್-ಈಸ್ಟ್ ನವರಿದ್ದಾರೆ. ಕಾರ್ಮಿಕರು ಇನ್ನೂ ಹೋಗುತ್ತಲೇ ಇದ್ದಾರೆ. ಅವರಿಗಾದ ನೋವು, ಅನ್ಯಾಯ ಯಾರಿಗೂ ಆಗಿಲ್ಲ. ಅವರು ಮತ್ತೆ ವಾಪಸ್ ಬರ್ತಾರಾ ಎಂದು ಪ್ರಶ್ನಿಸಿದ ಅವರು, ಇದು ವ್ಯಾಪಾರ, ವಹಿವಾಟಿನ ಮೇಲೆ ಹೊಡೆತ ಬೀಳುತ್ತೆ. ಯಾವುದೇ ಮುಂಜಾಗ್ರತೆ ತೆಗೆದುಕೊಳ್ಳದೆ ಮಾಡಿದ್ದು ಸರಿಯಲ್ಲ. ಕೇಂದ್ರ ಹೇಳಿದಂತೆ ಬಿಜೆಪಿ ರಾಜ್ಯ ಪಾಲಿಸಿಕೊಂಡು ಬರ್ತಿವೆ ಎಂದು ಹೇಳಿದರು.
ಇನ್ನು ಡಿಕೆಶಿ ಪದಗ್ರಹಣ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿ, ಪದಗ್ರಹಣ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನೀಡಿರಲಿಲ್ಲ. ಆದ್ರೆ ಅಮಿತ್ ಶಾ ರ‍್ಯಾಲಿಗೆ ಅನುಮತಿ ನೀಡಲಾಗಿದೆ. ಅಲ್ಲಿ ಮಾರ್ಗಸೂಚಿ ಅನ್ವಯ ಆಗಲ್ವಾ..? ಅವರಿಗೊಂದು ನ್ಯಾಯ ನಮಗೊಂದು ನ್ಯಾಯವೇ ಎಂದು ಸರ್ಕಾರದ ವಿರುದ್ಧ ಗರಂ ಆದ ಪಾಟೀಲ್, ಮುಖ್ಯಮಂತ್ರಿಗಳು ಈಗ ಅವಕಾಶ ಕೊಡುವ ಬಗ್ಗೆ ಹೇಳಿದ್ದಾರೆ, ನೋಡೋಣ ಎಂದರು.








