ಬೆಂಗಳೂರು : ಮನುಕುಲಕ್ಕೆ ಸವಾಲಾಗಿರುವ ಕೊರೊನಾ ವೈರಸ್ ಸದ್ಯ ಎಲ್ಲರ ನಿದ್ದೆಗೆಡಿಸಿದ್ದು, ಸಿಕ್ಕ ಸಿಕ್ಕವರ ದೇಹ ಹೊಕ್ಕುತ್ತಿದೆ. ಬೆಂಗಳೂರಿನಲ್ಲಿ ಪ್ರತಿ ದಿನ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದ್ದು, ಇದೀಗ ಸಸ್ಯ ಕಾಶಿ ಲಾಲ್ ಬಾಗ್ ನಲ್ಲೂ ಕೊರೊನಾ ಭೀತಿ ಆವರಿಸಿದೆ.
ಹೌದು..! ದಿನನಿತ್ಯ ಲಾಲ್ ಬಾಗ್ ಗೆ ಹೋಗುತ್ತಿದ್ದ 50 ವರ್ಷದ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿದ ಪರಿಣಾಮ ವಾಕಿಂಗ್ ಹೋಗುತ್ತಿದ್ದವರಲ್ಲಿ ಆತಂಕ ಹೆಚ್ಚಾಗಿದೆ.
ಸದ್ಯ ಇವರ ಸಂಪರ್ಕದಲ್ಲಿರುವ ವ್ಯಕ್ತಿಗಳ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಸೋಂಕಿನ ಮೂಲ ಪತ್ತೆಹಚ್ಚಲಾಗುತ್ತಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿ ಡಾ.ಶಿವಕುಮಾರ್ ತಿಳಿಸಿದ್ದಾರೆ. ಹಾಗೇ ವಾಕಿಂಗ್, ಜಾಗಿಂಗ್ ಅಂತ ಹೋಗುವಾಗ ಎಚ್ಚರಿಕೆಯಿಂದ ಇರಿ ಎಂದು ಸಲಹೆ ನೀಡಿದ್ದಾರೆ.
ಕೊರೊನಾ ಲಾಕ್ ಡೌನ್ ವೇಳೆ ಲಾಕ್ ಆಗಿದ್ದ ಉದ್ಯಾನಗಳನ್ನು ಸರ್ಕಾರ ಲಾಕ್ ಡೌನ್ ಸಡಿಲಿಕೆ ಬಳಿಕ ಜನರಿಗಾಗಿ ಮುಕ್ತಗೊಳಿಸಿತ್ತು. ಪ್ರತಿಷ್ಠಿತ ಲಾಲ್ ಬಾಗ್ ನಲ್ಲಿ ಜನರು ಬೆಳಗ್ಗೆ ವಾಕಿಂಗ್ ಹೋಗಲು ಪ್ರಾರಂಭಿಸಿದ್ದರು.
ಹೀಗೆ ಪ್ರತಿದಿನ ವಾಕಿಂಗ್ ಹೋಗುತ್ತಿದ್ದ 50 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದ್ದು, ಇವರ ಜತೆ ವಾಕಿಂಗ್ ಮಾಡುತ್ತಿದ್ದವರಲ್ಲಿ ಆತಂಕ ಹೆಚ್ಚಾಗಿದ್ದು, ಲಾಲ್ ಬಾಗ್ ಗೆ ವಾಕಿಂಗ್ ಹೋಗುತ್ತಿದ್ದವರಲ್ಲೂ ಭೀತಿ ಶುರುವಾಗಿದೆ.