ಜಿಂಬಾಬ್ವೆ ಪ್ರವಾಸ ರದ್ದು… ಬೇಸರ ವ್ಯಕ್ತಪಡಿಸಿದ ಕೋಚ್ ಲಾಲ್‍ಚಾಂದ್ ರಜಪೂತ್
ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಗೆದ್ದಿದ್ದು ಯಂಗ್ ಧೋನಿ ಟೀಮ್. ಇದು ಗೊತ್ತಿದ್ದ ವಿಚಾರವೇ. ಹಾಗೇ ಆ ಟೂರ್ನಿಗೆ ಟೀಮ್ ಇಂಡಿಯಾಗೆ ಕೋಚ್ ಇರಲಿಲ್ಲ. ಬದಲಾಗಿ ಇದ್ದದ್ದು ಟೀಮ್ ಮ್ಯಾನೇಜರ್. ಅವರ ಹೆಸರು ಲಾಲ್ ಚಾಂದ್ ರಜಪೂತ್. ಟೀಮ್ ಇಂಡಿಯಾದ ಟಿ-ಟ್ವೆಂಟಿ ವಿಶ್ವಕಪ್ ಗೆಲುವಿನಲ್ಲಿ ಲಾಲ್‍ಚಾಂದ್ ರಜಪೂತ್ ತಂತ್ರಗಾರಿಕೆಯೂ ಕಾರಣವಾಗಿತ್ತು ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಇದಕ್ಕೂ ಮೊದಲು ರಜಪೂತ್ ಅವರು 2007ರ 19 ವಯೋಮಿತಿ ಭಾರತ ತಂಡದ ತರಬೇತುದಾರನಾಗಿದ್ದರು. ಬಳಿಕ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಆಗಿದ್ದರು. ಆದ್ರೆ ಮುಂಬೈ ಇಂಡಿಯನ್ಸ್ ತಂಡದ ಹರ್ಭಜನ್ ಸಿಂಗ್ ಅವರು ಪಂಜಾಬ್ ಕಿಂಗ್ಸ್ ಇಲೆವೆನ್ ತಂಡದ ಶ್ರೀಶಾಂತ್ ಅವರಿಗೆ ಕೆನ್ನೆಗೆ ಹೊಡೆದಾಗ ರಜಪೂತ್ ನಗುತ್ತಿದ್ದರು. ಈ ದೃಶ್ಯ ವಿಡಿಯೋದಲ್ಲಿ ಸಾಬೀತಾಗಿತ್ತು. ಹೀಗಾಗಿ ಬಿಸಿಸಿಐ ಅವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಂಡಿತ್ತು
ಬಳಿಕ ರಜಪೂತ್ ಅವರು 2016ರಲ್ಲಿ ಅಫಘಾನಿಸ್ತಾನ ತಂಡದ ಕೋಚ್ ಆಗಿ ನೇಮಕಗೊಂಡಿದ್ದರು. ರಜಪೂತ್ ಅವಧಿಯಲ್ಲೇ ಅಫಘಾನಿಸ್ತಾನ ತಂಡ ಪೂರ್ಣ ಪ್ರಮಾದಲ್ಲಿ ಐಸಿಸಿ ಮಾನ್ಯತೆಯನ್ನು ಪಡೆದುಕೊಂಡಿತ್ತು. ಆ ನಂತರ 2018ರಲ್ಲಿ ರಜಪೂತ್ ಅವರು ಜಿಂಬಾಬ್ವೆ ತಂಡದ ಕೋಚ್ ಆಗಿ ನೇಮಕಗೊಂಡಿದ್ದರು. ರಜಪೂತ್ ಗರಡಿಯಲ್ಲಿ ಪಳಗಿದ ಜಿಂಬಾಬ್ವೆ ತಂಡ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಗುರುತಿಸಿಕೊಂಡಿದೆ.
ಇದೀಗ ಆಗಸ್ಟ್ ನಲ್ಲಿ ನಡೆಯಬೇಕಿದ್ದ ಭಾರತ -ಜಿಂಬಾಬ್ವೆ ನಡುವಿನ ಮೂರು ಟಿ-ಟ್ವೆಂಟಿ ಪಂದ್ಯಗಳು ರದ್ದುಗೊಂಡಿವೆ, ಕೊರೋನಾ
ವೈರಸ್‍ನಿಂದ ಈಗಾಗಲೇ ಬಿಸಿಸಿಐ ಶ್ರೀಲಂಕಾ ಮತ್ತು ಜಿಂಬಾಬ್ವೆ ವಿರುದ್ಧದ ಸರಣಿಗಳನ್ನು ರದ್ದುಗೊಳಿಸಿದೆ.
ಬಿಸಿಸಿಐ ನಿರ್ಧಾರದ ಬಗ್ಗೆ ರಜಪೂತ್ ಅವರು ಕೊಂಚ ಬೇಸರ ವ್ಯಕ್ತಪಡಿಸಿದ್ದಾರೆ. ನಮ್ಮ ಆಟಗಾರರು (ಜಿಂಬಾಬ್ವೆ) ಭಾರತ ವಿರುದ್ಧ ಆಡುವುದನ್ನು ಎದುರು ನೋಡುತ್ತಿದ್ದರು. ವಿಶ್ವದ ಯಾವುದೇ ತಂಡವಾಗಿರಲಿ, ಭಾರತದ ವಿರುದ್ಧ ಆಡುವುದನ್ನು ಇಷ್ಟಪಡುತ್ತಿದ್ದರು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರಿತ್ ಬೂಮ್ರಾ, ಕುಲದೀಪ್ ಯಾದವ್ ಮೊದಲಾದವರ ಜೊತೆ ಆಡುವ ಅವಕಾಶವನ್ನು ನಮ್ಮ ಆಟಗಾರರು ಹೊಂದಿದ್ದರು ಅಂತ ರಜಪೂತ್ ಹೇಳಿದ್ದಾರೆ.
ಕಳೆದ ಆರು ತಿಂಗಳುಗಳಲ್ಲಿ ಎರಡನೇ ಬಾರಿ ಜಿಂಬಾಬ್ವೆ ವಿರುದ್ಧದ ಸರಣಿ ರದ್ದುಗೊಂಡಿದೆ. ಮೂರನೇ ಬಾರಿಯಾದ್ರೂ ನಮ್ಮ ತಂಡ ಭಾರತದ ವಿರುದ್ಧ ಆಡುವ ಅವಕಾಶ ಸಿಗುತ್ತೆ ಅನ್ನೋ ಆಶಾಭಾವನೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದರು.
ಈ ಹಿಂದೆ ಜಿಂಬಾಬ್ವೆ ಜನವರಿಯಲ್ಲೇ ಭಾರತದ ವಿರುದ್ಧ ಮೂರು ಟಿ-ಟ್ವೆಂಟಿ ಪಂದ್ಯಗಳನ್ನು ಆಡಬೇಕಿತ್ತು. ಆದ್ರೆ ಅಲ್ಲಿನ ಸರ್ಕಾರ ಜಿಂಬಾಬ್ವೆ ಕ್ರಿಕೆಟ್ ಮಂಡಳಿಯಲ್ಲಿ ಹಸ್ತಕ್ಷೇಪ ಮಾಡಿರುವುದರಿಂದ ಐಸಿಸಿ ಜಿಂಬಾಬ್ವೆ ತಂಡಕ್ಕೆ ನಿಷೇಧವನ್ನು ಹೇರಿತ್ತು.








