ಮುದ್ದೇಬಿಹಾಳ : ಕಳೆದ ಎರಡು ತಿಂಗಳಿನಿಂದ ವೃದ್ಧಾಪ್ಯ ಮಾಸಾಶನ ಬಂದಿಲ್ಲ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಎದುರು ಯರಝರಿ ಗ್ರಾಮದ ವೃದ್ಧೆಯೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಶಾಸಕ ಎ.ಎಸ್ ಪಾಟೀಲ ನಡಹಳ್ಳಿ, ಯರಝರಿ ಗ್ರಾಮದಲ್ಲಿರುವ ಶಾಲೆಗೆ ಭೇಟಿ ನೀಡಿದ್ದರು. ಈ ವೇಳೆ ಅದೇ ಗ್ರಾಮದ ಸಿದ್ಧವ್ವ ಹೊಸಮನಿ ಎಂಬ ವೃದ್ಧೆ ತನಗೆ ಎರಡು ತಿಂಗಳ ಮಾಸಾಶನ ಬರಬೇಕು ಎಂದು ಗೋಳು ತೋಡಿಕೊಂಡರು. ಕೂಡಲೇ ಶಾಸಕರು ವೃದ್ಧೆಯ ಕೈಯ್ಯಲ್ಲಿದ್ದ ಪಾಸ್ ಬುಕ್ ಅನ್ನು ತೆಗೆದುಕೊಂಡು ಪರಿಶೀಲನೆ ನಡೆಸಿದರು.
ಅಲ್ಲದೆ ಆಕೆಗೆ 1000 ರೂ. ವೈಯಕ್ತಿಕ ಧನಸಹಾಯವನ್ನು ಮಾಡಿದರು. ಎರಡು ದಿನಗಳಲ್ಲಿ ಬಾಕಿ ಮಾಸಾಶನದ ಹಣವನ್ನು ಅಧಿಕಾರಿಗಳ ಮೂಲಕ ಖಾತೆಗೆ ಜಮಾ ಮಾಡಿಸುವುದಾಗಿ ಭರವಸೆ ನೀಡಿದರು. ಈ ವೇಳೆ ತಹಶೀಲ್ದಾರ್ ಜಿ.ಎಸ್. ಮಳಗಿ, ತಾಪಂ ಇಓ ಶಶಿಕಾಂತ ಶಿವಪುರೆ ಇತರರು ಇದ್ದರು.








