ಬೆಂಗಳೂರು : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರದ ಶೂಟಿಂಗ್ ಮುಂದಿನ ತಿಂಗಳಿನಿಂದ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ಜುಲೈ 1ರಿಂದ ಫ್ಯಾಂಟಮ್ ಚಿತ್ರದ ಚಿತ್ರೀಕರಣವನ್ನು ಆರಂಭ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಜುಲೈನಿಂದ ಹೈದರಾಬಾದ್ ನಲ್ಲಿ ಚಿತ್ರದ ಚಿತ್ರೀಕರಣ ಮಾಡಲು ನಿರ್ಮಾಪಕ ಜಾಕ್ ಮಂಜು ತೀರ್ಮಾನ ಮಾಡಿದ್ದಾರೆ. ಹೀಗಾಗಿ ಜೂನ್ 16ರಿಂದ ಹೈದರಾಬಾದ್ ನ ಅನ್ನಪೂರ್ಣೇಶ್ವರಿ ಸ್ಟುಡಿಯೋದಲ್ಲಿ ಸೆಟ್ ಹಾಕಲಾಗುತ್ತದೆ. ಸ್ಟುಡಿಯೋದ ಎರಡು ಫ್ಲೋರ್ ನಲ್ಲಿ ಅದ್ಧೂರಿ ಸೆಟ್ ನಿರ್ಮಿಸಲಾಗುತ್ತದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಒಳಾಂಗಣದಲ್ಲಿ ಶೂಟಿಂಗ್ ಮಾಡಲು ಅನುಮತಿ ನೀಡಲಾಗಿದೆ. ಹೀಗಾಗಿ ಶೂಟಿಂಗ್ ಪ್ರಕ್ರಿಯೆಗಳು ಗರಿಗೆದರಿದ್ದು, ಬಹಳ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಶೂಟಿಂಗ್ ಮಾಡಲಾಗುತ್ತದೆ. ಈ ಮೂಲಕ ಕಲಾವಿದರು ಮತ್ತು ತಂತ್ರಜ್ಞರಿಗೆ ಬೇಕಾದ ಎಲ್ಲ ಮುನ್ನೆಚರಿಕಾ ಕ್ರಮ ಹಾಗೂ ಶೂಟಿಂಗ್ ಮಾಡಲು ಇರುವ ನಿಯಮವನ್ನ ಪಾಲಿಸಲು ಚಿತ್ರತಂಡ ಸಜ್ಜಾಗಿದೆ. ಸ್ವತಃ ಸುದೀಪ್ ಅವರೇ ಅಗತ್ಯ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡು ಸಿನಿಮಾ ಶೂಟಿಂಗ್ ಮಾಡಲು ಧೈರ್ಯ ನೀಡಿದ್ದಾರೆ.
ಮುಂದಿನ ತಿಂಗಳು ಚಿತ್ರತಂಡ ಹೈದರಾಬಾದ್ ಗೆ ಹೋಗುತ್ತಿದೆ. ಜೊತೆಗೆ ಚಿತ್ರೀಕರಣದಲ್ಲಿ ಭಾಗವಹಿಸುವವರು ಶೂಟಿಂಗ್ ಮುಗಿಯುವ ತನಕ ಶೂಟಿಂಗ್ ಸೆಟ್ ಬಿಟ್ಟು ಹೋಗುವಂತಿಲ್ಲ. ಶೂಟಿಂಗ್ ತೆರಳಿದವರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಕೂಡ ಮಾಡಲಾಗಿದೆ.
ಫ್ಯಾಂಟಮ್ ಸಿನಿಮಾವನ್ನು ಅನೂಪ್ ಭಂಡಾರಿ ನಿರ್ದೇಶನದ ಮಾಡುತ್ತಿದ್ದು, ಈ ಚಿತ್ರದಲ್ಲಿ ಕಿಚ್ಚ ವಿಕ್ರಾಂತ್ ರೋಣ ಎಂಬ ಖಡಕ್ ಅಧಿಕಾರಿಯ ಪಾತ್ರ ಮಾಡಲಿದ್ದಾರೆ. ಈ ಚಿತ್ರದ ಮೊದಲ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದ್ದು, ಭಾರಿ ವೈರಲ್ ಆಗಿದೆ.