Ranji Trophy 2022-23: ಕರ್ನಾಟಕದ ವಿರುದ್ಧ ಛತ್ತಿಸ್‌ಗಡಕ್ಕೆ ಮೊದಲ ದಿನದ ಗೌರವ
ಆರಂಭಿಕ ಆಘಾತದ ನಡುವೆಯೂ ಅಶುತೋಷ್ ಸಿಂಗ್(118*) ಭರ್ಜರಿ ಶತಕ ಹಾಗೂ ಅಮರ್‌ದೀಪ್ ಖಾರೆ(93) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ರಣಜಿ ಟ್ರೋಫಿ ಪಂದ್ಯಾವಳಿಯ ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಛತ್ತೀಸ್‌ಗಡ್ ಮೊದಲ ದಿನದ ಗೌರವ ಪಡೆದಿದೆ.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಂಗಳವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕರ ವೈಫಲ್ಯದ ನಡುವೆಯೂ ದಿನದಂತ್ಯಕ್ಕೆ ಬಲಿಷ್ಠ ಕಮ್‌ಬ್ಯಾಕ್ ಮಾಡಿದ ಛತ್ತಿಸ್‌ಗಡ್ 90 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 267 ರನ್‌ಗಳಿಸಿದೆ. ತಂಡದ ಪರ ಅಶುತೋಷ್ ಸಿಂಗ್(118*) ಹಾಗೂ ಶಶಾಂಕ್ ಸಿಂಗ್(2*) ರನ್‌ಗಳಿಸಿ ಕಣದಲ್ಲಿದ್ದಾರೆ.
ಛತ್ತೀಸ್‌ಗಡ್ ಆರಂಭಿಕ ಆಘಾತ
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಛತ್ತೀಸ್‌ಗಡ್ ಆರಂಭಿಕ ಆಘಾತ ಕಂಡಿತು. ಇನ್ನಿಂಗ್ಸ್ ಆರಂಭಿಸಿದ ಅವನೀಶ್ ಧಲಿವಾಲ್(0) ಹಾಗೂ ಅನುಜ್ ತಿವಾರಿ(0) ಖಾತೆ ತೆರೆಯುವ ಮೊದಲೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ನಂತರ ಕಣಕ್ಕಿಳಿದ ನಾಯಕ ಹರ್ಪ್ರೀತ್ ಸಿಂಗ್ ಭಾಟಿಯಾ(34) ರನ್‌ಗಳ ಉಪಯುಕ್ತ ರನ್‌ಗಳಿಸಿ ಹೊರ ನಡೆದರು. ಪರಿಣಾಮ ಛತ್ತೀಸ್‌ಗಡ್ 43 ರನ್‌ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಆಘಾತ ಕಂಡಿತು.
ಅಶುತೋಷ್-ಅಮರ್‌ದೀಪ್ ಆಸರೆ
ಆದರೆ ಆರಂಭಿಕ ಆಘಾತಕ್ಕೆ ಸಿಲುಕಿದ ಛತ್ತೀಸ್‌ಗಡ್ ತಂಡಕ್ಕೆ ಅಶುತೋಷ್ ಸಿಂಗ್(118*) ಹಾಗೂ ಅಮರ್‌ದೀಪ್ ಖಾರೆ(93) ಉತ್ತಮ ಆಟವಾಡಿದರು. ಕರ್ನಾಟಕದ ಬೌಲರ್‌ಗಳ ಎದುರು ಎಚ್ಚರಿಕೆಯಿಂದ ಬ್ಯಾಟ್ ಮಾಡಿದ ಈ ಇಬ್ಬರು 4ನೇ ವಿಕೆಟ್‌ಗೆ 210 ರನ್‌ಗಳ ಅತ್ಯುತ್ತಮ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ತಾಳ್ಮೆಯ ಆಟವಾಡಿದ ಅಶುತೋಷ್ ಸಿಂಗ್, ಭರ್ಜರಿ ಶತಕ ಸಿಡಿಸಿ ಮಿಂಚಿದರೆ.
ಅಮರ್‌ದೀಪ್ ಖಾರೆ(93) ರನ್‌ಗಳ ಶತಕ ವಂಚಿತರಾಗಿ ನಿರಾಸೆ ಅನುಭವಿಸಿದರು.
ಅಮರ್‌ದೀಪ್ ಖಾರೆ ಔಟಾದ ಬಳಿಕ ಬಂದ ಸುಮಿತ್ ರುಯ್ಕರ್(0) ಬ್ಯಾಟಿಂಗ್ ವೈಫಲ್ಯ ಕಂಡರು. ಪರಿಣಾಮ ಛತ್ತಿಸ್‌ಗಡ್ ಮೊದಲ ದಿನದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 267 ರನ್‌ಗಳಿಸಿದೆ. ಕರ್ನಾಟಕದ ಪರ ವಿದ್ವತ್ ಕಾವೇರಪ್ಪ 3 ವಿಕೆಟ್ ಪಡೆದು ಮಿಂಚಿದರೆ. ವಾಸುಕಿ ಕೌಶಿಕ್ ಹಾಗೂ ವೈಶಾಕ್ ವಿಜಯ್‌ಕುಮಾರ್ ತಲಾ 1 ವಿಕೆಟ್ ಪಡೆದರು.








