Ranaji Trophy : 2ನೇ ಗೆಲುವು ದಾಖಲಿಸಿದ ಕರ್ನಾಟಕ
ಛತ್ತೀಸ್ಗಢ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಗೆಲುವು
ವೇಗಿ ವಿಜಯ್ ಕುಮಾರ್ ವೈಶಾಕ್ ಮಾರಕ ದಾಳಿಯ ನೆರವಿನಿಂದ ಆತಿಥೇಯ ಕರ್ನಾಟಕ ಕ್ರಿಕೆಟ್ ತಂಡ ಛತ್ತೀಸ್ಗಢ ವಿರುದ್ಧ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.
ಈ ಗೆಲುವಿನೊಂದಿಗೆ ಕರ್ನಾಟಕ ಟೂರ್ನಿಯಲ್ಲಿ 2ನೇ ಗೆಲುವು ದಾಖಲಿಸಿ 19 ಅಂಕಗಳೊಂದಿಗೆ ಸಿ ಗುಂಪಿನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ.
ಶುಕ್ರವಾರ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ನಾಲ್ಕನೆ ಮತ್ತು ಅಂತಿಮ ದಿನದಾಟದ ಪಂದ್ಯದಲ್ಲಿ ಎರಡನೆ ಇನ್ನಿಂಗ್ಸ್ ಮುಂದುವರೆಸಿದ ಛತ್ತೀಸ್ಗಢ 177 ರನ್ಗಳಿಗೆ ಆಲೌಟ್ ಆಯಿತು. ಕರ್ನಾಟಕ ತಂಡ 3 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಿತು.
ದಿನದಾಟದ ಆರಂಭದಲ್ಲಿ ಎರಡನೆ ಇನ್ನಿಂಗ್ಸ್ ಮುಂದುವರೆಸಿದ ಛತ್ತೀಸ್ಗಢ ವೇಗಿ ವಿಜಯ್ ಕುಮಾರ್ ವೈಶಾಕ್ ದಾಳಿಗೆ ತತ್ತರಿಸಿ ಹೋಯಿತು. ಆಶುತೋಷ್ ಸಿಂಗ್ 18, ಅಮನದೀಪ್ ಖಾರೆ 50 ರನ್ ಗಳಿಸಿ ವೈಶಾಕ್ ಎಸೆತದಲ್ಲಿ ಬೌಲ್ಡ್ ಆದರು. ನಾಯಕ ಹರಪ್ರೀತ್ ಸಿಂಗ್ 8, ಮಯಾಂಕ್ ವರ್ಮಾ 46, ಶಶಾಂಕ್ ಸಿಂಗ್ 12, ಅಜಯ್ ಮಂಡಲ್ 13, ಸುಮಿತ್ ರೂಯಿಕರ್ 18, ರವಿ ಕಿರಣ್ ಅಜೇಯ 1, ಸೌರಭ್ ಮಜುಂಧರ್ 6 ರನ ಕಲೆ ಹಾಕಿದರು.
ಕರ್ನಾಟಕ ಪರ ವಿಜಯ್ಕುಮಾರ ವೈಶಾಕ್ 59ಕ್ಕೆ 5 ವಿಕೆಟ್, ಕೆ.ಗೌತಮ್ 41ಕ್ಕೆ 2, ಎಸ್.ಗೋಪಾಲ್ 21ಕ್ಕೆ 1, ವಿದ್ವತ್ ಕಾವೇರಪ್ಪ 27ಕ್ಕೆ 1, ವಾಸುಕಿ ಕೌಶಿಕ್ 24ಕ್ಕೆ 1 ವಿಕೆಟ್ ಪಡೆದರು.
123 ರನ್ ಗಳ ಸುಲಭ ಗುರಿಯೊಂದಿಗೆ ಎರಡನೆ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ನಾಯಕ ಮಯಾಂಕ್ ಅಗರ್ವಾಲ್ (14 ರನ್) ಅವರ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆರ್.ಸಮರ್ಥ್ (24ರನ್) ರನೌಟ್ ಆದರು. ನಿಕಿನ್ ಜೋಸ್ ಅಜೇಯ 44 ರನ್, ಮನೀಶ್ ಪಾಂಡೆ 27 ರನ್, ಕೆ.ಗೌಥಮ್ ಅಜೇಯ 2 ರನ್ ಕಲೆ ಹಾಕಿದರು.
ಸಂಕ್ಷಿಪ್ತ ಸ್ಕೋರ್
ಛತ್ತೀಸ್ಗಢ ಮೊದಲ ಇನ್ನಿಂಗ್ಸ್ 311 ರನ್ ಆಲೌಟ್
ಕರ್ನಾಟಕ ಮೊದಲ ಇನ್ನಿಂಗ್ಸ್ 366 ರನ್ ಆಲೌಟ್
ಛತ್ತೀಸ್ಗಢ ಎರಡನೆ ಇನ್ನಿಂಗ್ಸ್ 177 ರನ್ ಆಲೌಟ್
ಕರ್ನಾಟಕ ಎರಡನೆ ಇನ್ನಿಂಗ್ಸ್ 128/3








