ಬೆಳಗಾವಿ: ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆ ಬೆಳಗಾವಿ ಸೇರಿದಂತೆ ರಾಜ್ಯದ ಕೆಲ ನಿರ್ದಿಷ್ಟ ರೋಗಿಗಳು ಮಾತ್ರ ಮಹಾರಾಷ್ಟ್ರಕ್ಕೆ ತೆರಳಲು ಅನುಮತಿ ನೀಡುವುದಾಗಿ ಬೆಳಗಾವಿ ಜಿಲ್ಲಾಡಳಿತ ತಿಳಿಸಿದೆ.
ದೇಶದಲ್ಲೇ ಅತಿಹೆಚ್ಚು ಕೊರೊನಾ ಪೀಡಿತರನ್ನು ಹೊಂದಿರುವ ಮಹಾರಾಷ್ಟ್ರಕ್ಕೆ ರಾಜ್ಯದವರು ತೆರಳಲು ಅನುಮತಿ ನಿರಾಕರಿಸಲಾಗಿದೆ. ಕೇವಲ ಹೆರಿಗೆ, ಡಯಾಲಿಸಿಸ್ ರೋಗಿಗಳು, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರನ್ನು ಮಾತ್ರ ಚೆಕ್ ಪೋಸ್ಟ್ ಮೂಲಕ ತೆರಳಲು ಅವಕಾಶ ನೀಡುವುದಾಗಿ ಕಾಗವಾಡ ತಹಶೀಲ್ದಾರ್ ಪ್ರಮೀಳಾ ದೇಶಪಾಂಡೆ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಕಾಗವಾಡ ತಾಲೂಕುಗಳು ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿವೆ. ಇಲ್ಲಿಂದ ದಿನ ನಿತ್ಯ ಕನ್ನಡಿಗರು ಮಹಾರಾಷ್ಟ್ರಕ್ಕೆ, ಮಾಹಾರಾಷ್ಟ್ರದ ಗಡಿ ಭಾಗದವರು ಬೆಳಗಾವಿ ಜಿಲ್ಲೆಗೆ ಬರುವುದು ಸಾಮಾನ್ಯ. ಆದರೆ, ಲಾಕ್‍ಡೌನ್ ನಂತರ ಎರಡೂ ರಾಜ್ಯಗಳ ನಡುವೆ ಜನರ ಸಂಚಾರವನ್ನೂ ನಿರ್ಬಂಧಿಸಲಾಗಿದೆ.
ಇತ್ತೀಚೆಗೆ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುತ್ತಿರುವವ ಸಂಖ್ಯೆ ಹೆಚ್ಚಿದಂತೆ ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಯಾರೊಬ್ಬರು ಗಡಿದಾಟಿ ಬರದಂತೆ ನೋಡಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.








