2002ರಲ್ಲಿ ಸೌರವ್ ಗಂಗೂಲಿ ಮಾತಿಗೂ ಇಲ್ಲ ಅಂದಿದ್ದೇಕೆ ಜಾವಗಲ್ ಶ್ರೀನಾಥ್…!
ಜಾವಗಲ್ ಶ್ರೀನಾಥ್. ಟೀಮ್ ಇಂಡಿಯಾದ ಮಾಜಿ ವೇಗದ ಬೌಲರ್. ಸರಳ-ಸಜ್ಜನಿಕೆಯ ಕ್ರಿಕೆಟಿಗ. ವೃತ್ತಿ ಬದುಕಿಲ್ಲಿ ಒಂಚೂರು ಕಳಂಕವನ್ನು ತಂದುಕೊಳ್ಳದ ಅಪ್ರತಿಮ ವೇಗಿ. ದಶಕಗಳ ಕಾಲ ಟೀಮ್ ಇಂಡಿಯಾದ ವೇಗದ ಬೌಲಿಂಗ್ ವಿಭಾಗದ ಸಾರಥ್ಯವನ್ನು ವಹಿಸಿಕೊಂಡಿದ್ದರು. ಆದ್ರೆ ತನ್ನ ವೃತ್ತಿ ಬದುಕಿನ ಕೊನೆಯ ದಿನಗಳಲ್ಲಿ ಭಾರತದ ಆಯ್ಕೆ ಸಮಿತಿಯು ಶ್ರೀನಾಥ್ ಅವರನ್ನು ಕೆಟ್ಟದಾಗಿ ನಡೆಸಿಕೊಂಡಿತ್ತು.
ಈ ವಿಚಾರವನ್ನು ಸ್ವತಃ ಜಾವಗಲ್ ಶ್ರೀನಾಥ್ ಅವರೇ ಹೇಳಿಕೊಂಡಿದ್ದಾರೆ. ಹಾಗೇ ಸೌರವ್ ಗಂಗೂಲಿಗೆ ತಾನು ತಂಡದಲ್ಲಿರಬೇಕು ಎಂಬ ಮನಸ್ಸಿತ್ತು. ಅದ್ರಲ್ಲೂ 2002ರ ಇಂಗ್ಲೆಂಡ್ ಪ್ರವಾಸಕ್ಕೆ ನಾನು ಟೀಮ್ ಇಂಡಿಯಾದಲ್ಲಿರಬೇಕು ಎಂದು ಸ್ವತಃ
ಗಂಗೂಲಿಯೇ ಫೋನ್ ಮಾಡಿ ಹೇಳಿದ್ದರು. ಆದ್ರೆ ನಾನು ಗಂಗೂಲಿಯವರ ಮಾತನ್ನು ಕೇಳಲಿಲ್ಲ. ಇಲ್ಲ. ನಾನು ಬರಲ್ಲ ಎಂದು ಹೇಳಿದ್ದೆ. ಯಾಕಂದ್ರೆ ನಾನು ಆ ಸಂದರ್ಭದಲ್ಲಿ ಸಾಕಷ್ಟು ನೊಂದುಕೊಂಡಿದ್ದೆ. ಆಯ್ಕೆ ಸಮಿತಿ ನನ್ನನ್ನು ಆ ರೀತಿ ನಡೆಸಿಕೊಂಡಿತ್ತು ಅಂತ ಶ್ರೀನಾಥ್ ಹೇಳಿದ್ದಾರೆ.
2003ರ ವಿಶ್ವಕಪ್ ಟೂರ್ನಿಗೆ ಮುನ್ನ. ನಾವು ವೆಸ್ಟ್ ಇಂಡೀಸ್ ಪ್ರವಾಸ ಮಾಡಿದ್ದೇವು. ಆ ನಂತರ ಆಯ್ಕೆಗಾರರು ನನ್ನ ಗಮನಕ್ಕೆ ತರದೇ ನಿನಗೆ ನಾವು ವಿಶ್ರಾಂತಿ ನೀಡುತ್ತಿದ್ದೇವು ಎಂದು ಹೇಳಿದ್ರು. ಸಾಮಾನ್ಯವಾಗಿ ನಾವೇ ಆಯ್ಕೆ ಸಮಿತಿಯ ಮುಂದೆ ಮಾತನಾಡಿ ವಿಶ್ರಾಂತಿ ಬೇಕು ಅಂತ ಕೇಳುತ್ತಿದ್ದೇವು. ಆದ್ರೆ ಆಯ್ಕೆ ಸಮಿತಿಯ ನಿರ್ಧಾರ ನನಗೆ ಯಾಕೋ ಸರಿ ಅಂತ ಅನ್ನಿಸಲಿಲ್ಲ. ನಾನು ತುಂಬಾನೇ ಅಪ್ಸೆಟ್ ಆಗಿದ್ದೆ. ನನ್ನ ಬದುಕನ್ನು ಇನ್ನೊಬ್ಬರು ನಿರ್ಧಾರ ಮಾಡುವುದು ನನಗೆ ಇಷ್ಟವಿರಲಿಲ್ಲ ಅಂತ ಶ್ರೀನಾಥ್ 18 ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸಿಕೊಂಡ್ರು.
ವೆಸ್ಟ್ ಇಂಡೀಸ್ ಸರಣಿಯ ನಂತರ ಭಾರತ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲು ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಆ ಸರಣಿಗೆ ಶ್ರೀನಾಥ್ ಭಾರತ ತಂಡದಲ್ಲಿ ಇರಲಿಲ್ಲ. ಆಗ ನಾಯಕನಾಗಿದ್ದ ಸೌರವ್ ಗಂಗೂಲಿಯವರು ಶ್ರೀಗೆ ಕರೆ ಮಾಡಿ ತಂಡಕ್ಕೆ ಬರುವಂತೆ ಕೇಳಿಕೊಂಡಿದ್ದರು. ಅಪ್ಸೆಟ್ ಆಗಿದ್ದ ಶ್ರೀನಾಥ್ ಗಂಗೂಲಿಗೆ ಇಲ್ಲ. ಬರಲ್ಲ ಅಂತ ಹೇಳಿದ್ರಂತೆ. ಆ ನಂತರ ಗಂಗೂಲಿಯ ಒತ್ತಾಯಕ್ಕೆ ಮಣಿದು ನ್ಯೂಜಿಲೆಂಡ್ ಸರಣಿಯಲ್ಲಿ ಆಡಿದ್ರು. ಹಾಗೇ 2003ರ ವಿಶ್ವಕಪ್ ಟೂರ್ನಿಯಲ್ಲೂ ಆಡಿದ್ದರು. ವಿಶ್ವಕಪ್ ಟೂರ್ನಿಯ ನಂತರ ಶ್ರೀನಾಥ್ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ರು. ವಿಶ್ವಕಪ್ ಟೂರ್ನಿಯ 11 ಪಂದ್ಯಗಳಲ್ಲಿ ಶ್ರೀ 16 ವಿಕೆಟ್ ಕಬಳಿಸಿದ್ದರು.
ನಾನು ಇಂಗ್ಲೆಂಡ್ ಸರಣಿಯಿಂದ ವಂಚಿತನಾದೆ. ಆಗ ಗಂಗೂಲಿ ನೀನು ತಂಡವನ್ನು ಸೇರಿಕೊಳ್ಳುವುದು ಉತ್ತಮ ಎಂದಿದ್ದರು. ಆಗ ನಾನು ಅಪ್ಸೆಟ್ ಆಗಿದ್ದ ಕಾರಣ ಆಗಲ್ಲ ಅಂದಿದ್ದೆ. ನನಗೆ ಕೌಂಟಿ ತಂಡಗಿಂತ ಭಾರತದ ಪರ ಆಡುವುದು ಮುಖ್ಯವಾಗಿತ್ತು. ಆ ನಂತರ ಎಲ್ಲವೂ ಸರಿ ಹೋಯ್ತು. ನನ್ನ ನಿರ್ಧಾರವನ್ನು ಬದಲಾಯಿಸಿಕೊಂಡೆ. ವಿಶ್ವಕಪ್ನಲ್ಲೂ ಆಡಿದ್ದೆ ಅಂತ ಶ್ರೀ ಹಳೆಯ ದಿನಗಳನ್ನು ನೆನಪಿಸಿಕೊಂಡ್ರು.
ಟೀಮ್ ಇಂಡಿಯಾದಲ್ಲಿ ನನ್ನ ಶಕ್ತಿ ಕಡಿಮೆಯಾದಾಗ ಬೇರೆಯವರಿಗೆ ಅವಕಾಶ ನೀಡಬೇಕು. ಆಗ ಯುವ ಬೌಲರ್ಗಳು ತಂಡಕ್ಕೆ ಸೇರ್ಪಡೆಯಾಗಿದ್ದರು. ಅವರನ್ನು ತಡೆಯುವ ಮನಸ್ಸು ನನಗೆ ಇಷ್ಟವಿರಲಿಲ್ಲ. ನನಗೆ ಸಂತೋಷವಿದೆ. ನನಗೆ ಯಾವುದೇ ರೀತಿಯ ವಿಷಾದವಿಲ್ಲ. ಘನತೆಯೊಂದಿಗೆ ಹೊರನಡೆಯುವುದು ಒಳ್ಳೆಯದ್ದು ಎಂಬುದು ನನ್ನ ಭಾವನೆಯಾಗಿತ್ತು ಅಂತಾರೆ ಜಾವಗಲ್ ಶ್ರೀನಾಥ್.








