ಬೀಜಿಂಗ್ ನಲ್ಲಿ ದಿಢೀರನೆ ಲಾಕ್ಡೌನ್ ಘೋಷಣೆ

ಬೀಜಿಂಗ್, ಜೂನ್ 14: ಚೀನಾದ ರಾಜಧಾನಿ ಬೀಜಿಂಗ್ ನಲ್ಲಿ ಮತ್ತೆ ಹೊಸದಾಗಿ ಕೊರೊನಾ ವೈರಸ್ ಪ್ರಕರಣಗಳು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಬೀಜಿಂಗ್ನಲ್ಲಿ ಏಕಾಏಕಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಬೀಜಿಂಗ್ ನಲ್ಲಿ ಸುಮಾರು 517 ಮಂದಿಯನ್ನು ಕೊರೊನಾ ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 47 ಜನರ ಗಂಟಲು ದ್ರವ ಪರೀಕ್ಷಾ ಮಾದರಿಯಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅದರಲ್ಲೂ ಏಷ್ಯಾದ ಅತಿ ದೊಡ್ಡ ಮತ್ತು ಪ್ರಮುಖ ಸಗಟು ಮಾರುಕಟ್ಟೆ ಶಿನ್ಫಾದಿ ಕೊರೊನಾ ಸೋಂಕಿನ ಕೇಂದ್ರ ಬಿಂದುವಾಗಿ ಕಾಣಿಸಿಕೊಂಡಿದೆ.

ಈ ಮೊದಲೇ ಶಿನ್ಫಾದಿ ಮಾರುಕಟ್ಟೆಯಲ್ಲಿ ಗೋಮಾಂಸ ಮತ್ತು ಮಟನ್ ಮಾರಾಟವನ್ನು ಸ್ಥಗಿತಗೊಳಿಸಿ, ದಿನಸಿ ಪದಾರ್ಥಗಳನ್ನು ಮಾತ್ರ ಖರೀದಿಸಲು ಅನುಮತಿ ನೀಡಲಾಗಿತ್ತು. ಕೊರೊನಾ ಸೋಂಕು ದೃಢಪಟ್ಟ ಆರು ಮಂದಿ ಶುಕ್ರವಾರದಂದು ತಾವು ಶಿನ್ಫಾದಿ ಮಾರುಕಟ್ಟೆಗೆ ಭೇಟಿ ನೀಡಿದ್ದೇವೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚೀನಾ ರಾಜಧಾನಿ ಬೀಜಿಂಗ್ನ ಎಲ್ಲಾ ಕೀಡಾ ಚಟುವಟಿಕೆಗಳು ಮತ್ತು ಅಂತರ್ ಪ್ರಾಂತೀಯ ಸಂಚಾರಗಳನ್ನು ಏಕಾಏಕಿ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ.








