ಸಿಂದಗಿ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಶಿವಾನಂದ ಪಾಟೀಲ್ ಹೃದಯಾಘಾತದಿಂದ ನಿಧನ…
ವಿಜಯಪುರ ಜಿಲ್ಲೆಯ ಸಿಂದಗಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಿವಾನಂದ ಪಾಟೀಲ್ ಸೋಮಜಾಳ ಅವರು ಶುಕ್ರವಾರ ರಾತ್ರಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ವಿಜಯಪುರ ನಗರದಲ್ಲಿ ಶುಕ್ರವಾರ ನಡೆದ ಎಚ್ ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಜೆಡಿಎಸ್ ಪಂಚರತ್ನ ರಥಯಾತ್ರೆಯಲ್ಲಿ ಭಾಗವಹಿಸಿದ್ದ ಶಿವಾನಂದ ಪಾಲೀಟ್ ಅವರು ಮಧ್ಯಾಹ್ನ ಸಿಂದಗಿಗೆ ತೆರಳಿದ್ದರು. ಸಿಂದಗಿಯಲ್ಲಿ ಪರಿಚಯಸ್ಥರ ಮನೆಯಲ್ಲಿ ಮಾತನಾಡುತ್ತ ಕುಳಿತಿದ್ದಾಗ ಏಕಾಏಕ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
54 ವರ್ಷದ ಶಿವಾನಂದ ಪಾಟೀಲ್ ಅವರು ಪತ್ನಿ, ಓರ್ವ ಪುತ್ರ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಜನತಾದಳದ ಮುಖ್ಯಸ್ಥರಾದ ಹೆಚ್ ಡಿ ಕುಮಾರಸ್ವಾಮಿಯವರು ಟ್ವೀಟ್ ಮಾಡಿ ಸಂತಾಪವನ್ನ ತಿಳಿಸಿದ್ದಾರೆ. “ಸಿಂದಗಿ ವಿಧಾನಸಭೆ ಕ್ಷೇತ್ರದ ಜನತಾದಳದ ಪಕ್ಷದ ಅಭ್ಯರ್ಥಿ ಶ್ರೀ ಶಿವಾನಂದ ಪಾಟೀಲ ಅವರ ಅಕಾಲಿಕ ಮರಣ ನನಗೆ ತೀವ್ರ ಆಘಾತ ಉಂಟು ಮಾಡಿದೆ. ಜ.18ರಂದು ಇಡೀ ದಿನ ಅವರು ನನ್ನೊಂದಿಗೆ ಸಿಂದಗಿ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಮರುದಿನ ಯಾತ್ರೆಯೊಂದಿಗೆ ನನ್ನನ್ನು ಆತ್ಮೀಯವಾಗಿ ದೇವರ ಹಿಪ್ಪರಗಿ ಕ್ಷೇತ್ರಕ್ಕೆ ಬೀಳ್ಕೊಟ್ಟಿದ್ದರು. ನಿನ್ನೆ ಮಧ್ಯಾಹ್ನವೂ ಮತ್ತೆ ನಾಗಠಾಣ ಕ್ಷೇತ್ರದ ಯಾತ್ರೆಯಲ್ಲಿ ಭಾಗವಹಿಸಿದ್ದರು”
ಸೇನೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿದ್ದ ಶ್ರೀ ಪಾಟೀಲರು, ಸಮಾಜ ಸೇವೆಯ ಅದಮ್ಯ ಹಂಬಲ ಹೊಂದಿದ್ದರು. ಅತ್ಯುತ್ತಮ ಸಂಘಟನಾ ಶಕ್ತಿ, ಕ್ರಿಯಾಶೀಲತೆ ಹೊಂದಿದ್ದ ಅವರು ಪರಿಚಯವಾದ ಅಲ್ಪಕಾಲದಲ್ಲಿಯೇ ನನಗೆ ಅತ್ಯಂತ ಆತ್ಮೀಯರಾಗಿದ್ದರು ಶ್ರೀ ಶಿವಾನಂದ ಪಾಟೀಲರ ಅಗಲಿಕೆ ನನಗೆ ವೈಯಕ್ತಿಕವಾಗಿ ಅತೀವ ದುಃಖ ಉಂಟು ಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಭಾರತೀಯ ಸೇನೆಯಲ್ಲಿ 16 ವರ್ಷ ಸೇವೆ ಸಲ್ಲಿಸಿದ್ದ ಮಾಜಿ ಯೋಧ ಶಿವಾನಂದ ಪಾಟೀಲ್ ಅವರು ಇತ್ತೀಚಿಗೆ ರಾಜಕೀಯದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿದ್ದರು. ವಿಧಾನಸಭೆ ಚುನಾವಣೆಗೆ ಜೆಡಿಎಸ್ ಬಿಡುಗಡೆ ಮಾಡಿದ್ದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಶಿವಾನಂದ ಪಾಟೀಲ್ ಅವರಿಗೆ ಟಿಕೆಟ್ ಘೋಷಿಸಲಾಗಿತ್ತು.
Sindagi assembly constituency candidate Sivananda Patil no more…








