ಬೆಂಗಳೂರು: ಅಧಿವೇಶದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಸುಳ್ಳು ಮಾಹಿತಿ ನೀಡಿ ಸಿಕ್ಕಿಬಿದ್ದಿದ್ದಾರೆ. ಸದನದಲ್ಲಿ ಡಿಸೆಂಬರ್ 18 ರಂದು 144 ಸೆಕ್ಷನ್ ಸಮಯದಲ್ಲಿ ನಡೆದ ಪ್ರತಿಭಟನೆ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈ ವೇಳೆ ಅಂದು ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅವರನ್ನು ಪೊಲೀಸರು ಬಲವಂತವಾಗಿ ಎಳೆದೊಯ್ದ ಘಟನೆ ಬಗ್ಗೆ ಪ್ರಸ್ತಾಪವಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ರಾಮಚಂದ್ರ ಗುಹಾ ಅವರನ್ನು ಎಳೆದಾಡಬಾರದಿತ್ತು, ಘಟನೆ ನಂತರ ನಾನೇ ಗುಹಾ ಅವರಿಗೆ ಕರೆ ಮಾಡಿ ಕ್ಷಮೆ ಕೋರಿದ್ದೇನೆ’ ಎಂದರು. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಸ್ಪಷ್ಟನೆ ಕೊಟ್ಟಿರುವ ರಾಮಚಂದ್ರ ಗುಹಾ, ‘ಕರ್ನಾಟಕದ ಗೃಹ ಮಂತ್ರಿಗಳು ನನಗೆ ಯಾವುದೇ ಫೋನ್ ಕರೆ ಮಾಡಿಲ್ಲ, ಒಂದೊಮ್ಮೆ ಅವರು ಫೋನ್ ಕರೆ ಮಾಡಿ ಕ್ಷಮೆ ಕೋರಿದ್ದರೂ ಸಹ ನಾನು ಅವರ ಕ್ಷಮೆಯನ್ನು ಮನ್ನಿಸುತ್ತಿರಲಿಲ್ಲ’ ಬರೆದುಕೊಂಡಿದ್ದಾರೆ.