ಮುಂಬೈ : ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಸುದ್ದಿ ಎಲ್ಲರಿಗೂ ಶಾಕ್ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ, ನಟ ಅಕ್ಷಯ್ ಕುಮಾರ್, ಅನುಪಮ್ ಖೇರ್, ಅಜಯ್ ದೇವಗನ್, ನಟಿ ಬಿಪಾಶು ಬಸು ಸೇರಿದಂತೆ ಅನೇಕರು ಸೋಶಿಯಲ್ ಮೀಡಿಯಾದ ಮೂಲಕ ಸುಶಾಂತ್ ಸಾವಿಗೆ ಕಂಬನಿ ಮಿಡಿಯುತ್ತಿದ್ದಾರೆ.
ಸುಶಾಂತ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ‘ಸುಶಾಂತ್ ಸಿಂಗ್ ರಜಪೂತ್ …ಪ್ರತಿಭಾವಂತ ಯುವನಟ, ಬಹಳ ಬೇಗ ಹೊರಟು ಹೋಗಿದ್ದಾರೆ. ಅವರು ಟಿವಿ ಮತ್ತು ಸಿನಿಮಾರಂಗದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಮನರಂಜನಾ ಜಗತ್ತಿನಲ್ಲಿ ಅವರ ಏಳಿಗೆ ಅನೇಕರಿಗೆ ಸ್ಫೂರ್ತಿ ನೀಡಿತು ಮತ್ತು ಅವರು ಹಲವು ಸುಂದರ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ.ಅವರ ನಿಧನದಿಂದ ಆಘಾತವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪವಿದೆ. ಓಂ ಶಾಂತಿ, ‘ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ನಟ ಅಕ್ಷಯ್ ಕುಮಾರ್ ಟ್ವೀಟ್ ನಲ್ಲಿ, ‘ಈ ಸುದ್ದಿ ನನಗೆ ಆಘಾತವನ್ನೂಂಟು ಮಾಡಿದೆ. ಸುದ್ದಿ ತಿಳಿದು ಮಾತೇ ಬರುತ್ತಿಲ್ಲ. ನಾನು ಸುಶಾಂತ್ ಸಿಂಗ್ ಅಭಿನಯಿಸಿದ್ದ ‘ಚಿಚೋರ್’ ಸಿನಿಮಾ ನೋಡಿ ತುಂಬಾ ಆನಂದಿಸಿದ್ದೆ. ಆಗ ನನ್ನ ಸ್ನೇಹಿತ, ‘ಚಿಚೋರ್’ ಸಿನಿಮಾ ನಿರ್ಮಾಪಕ ಸಾಜಿದ್ ಗೆ ನಾನು ಸಿನಿಮಾ ನೋಡಿ ಎಷ್ಟು ಸಂತಸಪಟ್ಟೆ ಎಂದು ಹೇಳಿದ್ದೆ. ಅಲ್ಲದೇ ಆ ಸಿನಿಮಾದಲ್ಲಿ ನಾನು ಒಂದು ಭಾಗವಾಗಿ ಅಭಿನಯಿಸಬೇಕಿತ್ತು ಎಂದು ಹೇಳಿದ್ದೆ. ಸುಶಾಂತ್ ಪ್ರತಿಭಾವಂತ ನಟ. ದೇವರು ಈ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬಕ್ಕೆ ಕೊಡಲಿ ಎಂದು ನಾನು ಪ್ರಾರ್ಥಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ನಟ ಅಜಯ್ ದೇವಗನ್ ಕೂಡ ಟ್ವೀಟ್ ಮೂಲಕ ಸುಶಾಂತ್ ನಿಧನಕ್ಕೆ ಕಂಬನಿ ಮಿಡಿದಿದ್ದು, ಸುಶಾಂತ್ ಸಿಂಗ್ ರಜಪೂತ್ ಸಾವಿನ ಸುದ್ದಿ ನಿಜಕ್ಕೂ ದುಃಖಕರವಾಗಿದೆ. ಎಂತಹ ದುರಂತ, ಅವನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.
ಹಾಗೇ ‘ನಿಜಕ್ಕೂ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಸುದ್ದಿ ಕೇಳಿ ಶಾಕ್ ಆಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ನಟಿ ಬಿಪಾಶಾ ಬಸು ಸಂತಾಪ ಸೂಚಿಸಿದ್ದಾರೆ.