IND vs AUS 1st Test: ಟೆಸ್ಟ್‌ನಲ್ಲಿ ಮುಂದುವರಿದ ಕೆಎಲ್ ರಾಹುಲ್ ಬ್ಯಾಟಿಂಗ್ ವೈಫಲ್ಯ
ಟೆಸ್ಟ್ ಕ್ರಿಕೆಟ್‌ನಲ್ಲಿ ಸತತವಾಗಿ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಕನ್ನಡಿಗ ಕೆಎಲ್ ರಾಹುಲ್ ಪ್ರದರ್ಶನದ ಬಗ್ಗೆ ಸಾಕಷ್ಟು ಚರ್ಚೆ ಆರಂಭವಾಗಿದೆ.
ನಾಗ್ಪುರ್‌ನಲ್ಲಿ ಗುರುವಾರ ಆರಂಭಗೊಂಡ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಸ್ಥಾನ ಪಡೆದಿರುವ ಕೆಎಲ್ ರಾಹುಲ್, ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲರಾದರು. ಭರ್ಜರಿ ಫಾರ್ಮ್‌ನಲ್ಲಿರುವ ಯುವ ಆಟಗಾರ ಶುಭ್ಮನ್ ಗಿಲ್ ನಡುವಿನ ತೀವ್ರ ಪೈಪೋಟಿ ನಡುವೆ ತಂಡದಲ್ಲಿ ಸ್ಥಾನ ಪಡೆದಿದ್ದ ರಾಹುಲ್, ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಆಟವಾಡುವಲ್ಲಿ ವಿಫಲವಾಗಿರುವುದು, ಕ್ರಿಕೆಟ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
ನಾಯಕ ರೋಹಿತ್ ಶರ್ಮ ಜೊತೆಗೆ ಇನ್ನಿಂಗ್ಸ್ ಆರಂಭಿಸಿದ ಕನ್ನಡಿಗ ಕೆಎಲ್ ರಾಹುಲ್, ಉತ್ತಮ ಆರಂಭ ಪಡೆದರು ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ರೋಹಿತ್ ಶರ್ಮ ಜೊತೆಗೂಡಿ ಮೊದಲ ವಿಕೆಟ್‌ಗೆ 76 ರನ್‌ಗಳ ಉತ್ತಮ ಜೊತೆಯಾಟವಾಡಿದ್ದ ರಾಹುಲ್, 20 ರನ್‌ಗಳಿಸಿದ್ದ ಸಂದರ್ಭದಲ್ಲಿ ತಮ್ಮ ವಿಕೆಟ್ ಒಪ್ಪಿಸಿ ಹೊರ ನಡೆದರು. ಆ ಮೂಲಕ ಟೆಸ್ಟ್‌ನಲ್ಲಿ ತಮ್ಮ ಬ್ಯಾಟಿಂಗ್ ವೈಫಲ್ಯ ಮುಂದುವರಿಸಿದರು.
ಅಲ್ಲದೇ ಕಳೆದ ಹತ್ತು ಇನ್ನಿಂಗ್ಸ್‌ಗಳಲ್ಲಿ ಕೆಎಲ್ ರಾಹುಲ್ ಅವರಿಂದ ದೊಡ್ಡ ಇನ್ನಿಂಗ್ಸ್ ಬಂದಿಲ್ಲ. ಕಳೆದ ಹತ್ತು ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 50 ರನ್‌ಗಳಿಸಿರುವುದು ರಾಹುಲ್ ಅವರ ಬ್ಯಾಟ್‌ನಿಂದ ಬಂದಿರುವ ದೊಡ್ಡ ಇನ್ನಿಂಗ್ಸ್ ಆಗಿದೆ. ಹೀಗಾಗಿ ಪ್ರತಿಬಾರಿ ರನ್‌ಗಳಿಕೆಯಲ್ಲಿ ಎಡವುತ್ತಿರುವ ರಾಹುಲ್ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
ಕೆಎಲ್ ರಾಹುಲ್ ಪ್ರದರ್ಶನದ ಬಗ್ಗೆ ಪ್ರತಿಕ್ರಿಯಿಸಿರುವ ಕಪಿಲ್ ದೇವ್, ಉಪ ನಾಯಕನನ್ನ ತಂಡದಿಂದ ಕೈಬಿಡಬಾರದು ಎಂಬ ರೂಲ್ಸ್ ಎಲ್ಲೂ ಇಲ್ಲ. ಮೊದಲು ತಂಡದ ಪ್ಲೇಯಿಂಗ್ ಇಲವೆನ್‌ನ ಸಮತೋಲನವನ್ನ ಗಮನಿಸಬೇಕಿದೆ. ಕೆಎಲ್ ರಾಹುಲ್ ಉತ್ತಮ ಬ್ಯಾಟ್ಸ್‌ಮನ್ ಆಗಿದ್ದು, ವೈಯಕ್ತಿಕವಾಗಿ ನಾನು ಸಹ ಆತನನ್ನ ಇಷ್ಟಪಡುತ್ತೇನೆ. ಆದರೆ ಆತ ತಂಡಕ್ಕೆ ಫಿಟ್ ಅಲ್ಲ ಎನ್ನುವುದಾರೆ, ಏಕೆ ಆಡಿಸಬೇಕು? ಎಂದು ರಾಹುಲ್ ಪ್ರದರ್ಶನದ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಮತ್ತೊಂದೆಡೆ ಸೋಶಿಯಲ್ ಮೀಡಿಯಾದಲ್ಲೂ ಸಹ ಕೆಎಲ್ ರಾಹುಲ್ ಪ್ರದರ್ಶನದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ಒಂದೊಮ್ಮೆ ಮೊದಲ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಮಾಡುವ ಅವಕಾಶ ಸಿಕ್ಕದರೆ ರಾಹುಲ್ ದೊಡ್ಡ ಇನ್ನಿಂಗ್ಸ್ ಮೂಲಕ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಬೇಕಿದ್ದು, ಇಲ್ಲವಾದಲ್ಲಿ ಸರಣಿಯ ಮುಂದಿನ ಟೆಸ್ಟ್‌ಗಳಲ್ಲಿ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟವಾಗಬಹುದು.








