Jaydev Unadkat : ರಣಜಿ ಹಿನ್ನೆಲೆ ಭಾರತ ತಂಡದಿಂದ ಜಯದೇವ್ ಉನದ್ಕತ್ ಔಟ್
ಕರ್ನಾಟಕ ವಿರುದ್ಧ ಭರ್ಜರಿ ಗೆಲುವಿನ ಮೂಲಕ ಸೌರಾಷ್ಟ್ರ ತಂಡ ರಣಜಿ ಟ್ರೋಫಿ ಪಂದ್ಯಾವಳಿಯ ಫೈನಲ್ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಎಡಗೈ ವೇಗದ ಬೌಲರ್ ಜಯದೇವ್ ಉನದ್ಕತ್ ಅವರನ್ನ ಭಾರತ ಟೆಸ್ಟ್ ತಂಡದಿಂದ ಕೈಡಲಾಗಿದೆ.
ಆಸ್ಟ್ರೇಲಿಯ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಗಾಗಿ ಜಯದೇವ್ ಉನಾದ್ಕತ್ ಅವರನ್ನ ತಂಡಕ್ಕೆ ಆಯ್ಕೆ ಮಾಡಲಾಗಿತ್ತು.
ಆದರೆ ಉನಾದ್ಕತ್ ಸೌರಾಷ್ಟ್ರ ತಂಡದ ಪ್ರಮುಖ ವೇಗದ ಬೌಲರ್ ಆಗಿದ್ದು, ರಣಜಿ ಟ್ರೋಫಿ ಫೈನಲ್‌ನಲ್ಲಿ ತಂಡದ ಪರವಾಗಿ ಆಡಬೇಕಾದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ತಂಡದಿಂದ ಎಡಗೈ ವೇಗಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಸಿಐ) ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಜಯದೇವ್ ಉನಾದ್ಕತ್ ಅವರು ರಣಜಿ ಟ್ರೋಫಿ ಫೈನಲ್‌ಗಾಗಿ ಸೌರಾಷ್ಟ್ರ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಬಂಗಾಳ ವಿರುದ್ಧ ಸೌರಾಷ್ಟ್ರ ತಂಡ ಪ್ರಶಸ್ತಿಗಾಗಿ ಹಣಾಹಣಿ ನಡೆಸಲಿದೆ. ರಣಜಿ ಫೈನಲ್ ಫೆ.16ರಿಂದ ಆರಂಭವಾಗಲಿದ್ದು, ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ 2ನೇ ಟೆಸ್ಟ್ ಫೆ.17ರಿಂದ ದೆಹಲಿಯಲ್ಲಿ ನಡೆಯಲಿದೆ.
ಕಳೆದ ವರ್ಷ ಬಾಂಗ್ಲಾದೇಶ ಪ್ರವಾಸದ ಸಮಯದಲ್ಲಿ ಜಯದೇವ್ ಉನದ್ಕತ್, ಭಾರತ ಟೆಸ್ಟ್ ತಂಡಕ್ಕೆ ಮರಳಿದ್ದರು. ಬಾಂಗ್ಲಾ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ 2 ಟೆಸ್ಟ್‌ಗಳಿಗೆ ಉನಾದ್ಕತ್ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಇದೀಗ ಸೌರಾಷ್ಟ್ರ ಪರವಾಗಿ ಆಡಬೇಕಾದ ಕಾರಣಕ್ಕೆ ತಂಡದಿಂದ ಕೈ ಬಿಡಲಾಗಿದ್ದು, ಅವರ ಬದಲಿ ಆಟಗಾರನನ್ನು ಬಿಸಿಸಿಐ ಹೆಸರಿಸಿಲ್ಲ.
ಹೀಗಾಗಿ ಟೀಂ ಇಂಡಿಯಾ 2ನೇ ಟೆಸ್ಟ್‌ಗೆ ತನ್ನ 16 ಆಟಗಾರರ ತಂಡದಲ್ಲಿ ವೇಗಿಗಳಾದ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಉಮೇಶ್ ಯಾದವ್ ಅವರನ್ನು ಹೊಂದಿದೆ.








