ಒಂದು ಇಮೇಲ್..ಕೆಲವು ಪ್ರಶ್ನೆಗಳು… 7 ನಿಮಿಷಗಳ ಸಂದರ್ಶನ..ಇದು ಗ್ಯಾರಿ ಕಸ್ಟರ್ನ್ ಭಾರತದ ಕೋಚ್ ಆದ ಕಥೆ..!
ಗ್ಯಾರಿ ಕಸ್ಟರ್ನ್…ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ. ವಿಶ್ವ ಕ್ರಿಕೆಟ್‍ಗೆ ಅವರು ಒಬ್ಬ ಅತ್ಯುತ್ತಮ ಕ್ರಿಕೆಟಿಗ. ಆದ್ರೆ ಟೀಮ್ ಇಂಡಿಯಾಗೆ ಗುರು ಗ್ಯಾರಿ ಕಸ್ಟರ್ನ್. ಅಷ್ಟೇ ಅಲ್ಲ, ಭಾರತೀಯ ಕ್ರಿಕೆಟ್ ಅಭಿಮಾನಿಗಳು ಎಂದಿಗೂ ಈ ಹೆಸರನ್ನು ನೆನಪಿಟ್ಟುಕೊಳ್ಳುತ್ತಾರೆ. ಟೀಮ್ ಇಂಡಿಯಾ 2011ರ ವಿಶ್ವಕಪ್ ಗೆಲ್ಲಿಸಿಕೊಡುವಲ್ಲಿ ಗ್ಯಾರಿ ಕಸ್ಟರ್ನ್ ಪಾತ್ರ ಮಹತ್ವದ್ದಾಗಿದೆ. 90ರ ದಶಕದಲ್ಲಿ ಸಚಿನ್ ತೆಂಡುಲ್ಕರ್ ವಿರುದ್ಧವಾಗಿ ಆಟವಾಡಿದ್ದ ಗ್ಯಾರಿ ಕಸ್ಟರ್ನ್ ಅವರು 2011ರಲ್ಲಿ ಸಚಿನ್ ಜೊತೆ ಸೇರಿಯೇ ಟೀಮ್ ಇಂಡಿಯಾಗೆ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು.
ಧೋನಿ ಹುಡುಗರು ಗುರು ಗ್ಯಾರಿ ಕಸ್ಟರ್ನ್ ಮೇಲೆ ಅಪಾರ ನಂಬಿಕೆ, ವಿಶ್ವಾಸ ಹಾಗೂ ಸ್ನೇಹವನ್ನು ಹೊಂದಿದ್ದರು. ಈ ಹಿಂದಿನ ಕೋಚ್ ಆಗಿದ್ದ ಗ್ರೆಗ್ ಚಾಪೆಲ್ ಸಮಯದಲ್ಲಿ ಟೀಮ್ ಇಂಡಿಯಾ ಒಡಕಿನ ಮನೆಯಾಗಿತ್ತು. ಆದ್ರೆ ಗುರು ಗ್ಯಾರಿ ಕಸ್ಟರ್ನ್ ಟೀಮ್ ಇಂಡಿಯಾದ ಕೋಚ್ ಆದ ಮೇಲೆ ಎಲ್ಲವೂ ಬದಲಾಗಿ ಹೋಯ್ತು. ಡ್ರೆಸಿಂಗ್ ರೂಮ್ ನ ವಾತಾವರಣದ ಜೊತೆಗೆ ಆಟಗಾರರ ಮಾನಸಿಕ ಸ್ಥೈರ್ಯ ಕೂಡ ಹೆಚ್ಚಾಗಿತ್ತು. ಅಷ್ಟರ ಮಟ್ಟಿಗೆ ಗ್ಯಾರಿ ಕಸ್ಟರ್ನ್ ಟೀಮ್ ಇಂಡಿಯಾದ ಮೇಲೆ ಪ್ರಭಾವ ಬೀರಿದ್ದರು.
ಹಾಗೇ ನೋಡಿದ್ರೆ ಗ್ಯಾರಿ ಕಸ್ಟರ್ನ್ ಟೀಮ್ ಇಂಡಿಯಾಗೆ ಕೋಚ್ ಆಗುವುದಕ್ಕಿಂತ ಮುನ್ನ ಯಾವುದೇ ರೀತಿಯ ಅನುಭವ ಹೊಂದಿರಲಿಲ್ಲ. ಕೋಚಿಂಗ್ ನಲ್ಲಿ ಅಷ್ಟೊಂದು ಹೇಳಿಕೊಳ್ಳುವಂತಹ ಹೆಸರು ಕೂಡ ಮಾಡಿರಲಿಲ್ಲ. ಒಬ್ಬ ಕ್ರಿಕೆಟಿಗನಾಗಿ, ಕ್ರಿಕೆಟ್ ಆಟಗಾರನಾಗಿ ಮಾತ್ರ ಗ್ಯಾರಿ ಕಸ್ಟರ್ನ್‍ಗೆ ಅನುಭವ ಇತ್ತು. ಆದ್ರೆ ಪ್ರಮುಖ ತಂಡದ ಕೋಚ್ ಆಗುವಂತಹ ಯಾವುದೇ ಅನುಭವ ಅವರಲ್ಲಿ ಇರಲಿಲ್ಲ. ಹಾಗಾದ್ರೆ ಗ್ಯಾರಿ ಕಸ್ಟರ್ನ್ ಟೀಮ್ ಇಂಡಿಯಾದ ಕೋಚ್ ಆಗಿ ಹೇಗೆ ಆಯ್ಕೆಯಾದ್ರು ?
ಈ ಪ್ರಶ್ನೆಗೆ ಗ್ಯಾರಿಕಸ್ಟರ್ನ್ ನಗುತ್ತಲೇ ಉತ್ತರ ನೀಡುತ್ತಾರೆ. ಕೋಚ್ ಆಗುವಂತಹ ಸಮಯದಲ್ಲಿ ಸುನೀಲ್ ಗವಾಸ್ಕರ್, ಅನಿಲ್ ಕುಂಬ್ಳೆ ಮತ್ತು ರವಿಶಾಸ್ತ್ರಿ ಜೊತೆಗಿನ ಸಂವಾದ ಹೇಗಿತ್ತು ಎಂಬುದನ್ನು ಹೇಳಿಕೊಂಡಿದ್ದಾರೆ ಗ್ಯಾರಿ ಕಸ್ಟರ್ನ್.
ನನಗೆ ಟೀಮ್ ಇಂಡಿಯಾಗೆ ಕೋಚ್ ಆಗುವಂತೆ ಸುನೀಲ್ ಗವಾಸ್ಕರ್ ಅವರಿಂದ ಇ ಮೇಲೆ ಬಂದಿತ್ತು. ಆಗ ನನಗೆ ಅಚ್ಚರಿಯಾಯ್ತು. ಅಲ್ಲದೆ ಇದು ಫೇಕ್ ಇ ಮೇಲ್ ಅಂತ ಭಾವಿಸಿದ್ದೆ. ಹಾಗಾಗಿ ನಾನು ಅದಕ್ಕೆ ಉತ್ತರಿಸಲು ಹೊಗಿಲ್ಲ. ಬಳಿಕ ಅವರು ಎರಡನೇ ಬಾರಿ ಮತ್ತೊಂದು ಇಮೇಲ್ ಕಳುಹಿಸಿದ್ದರು. ಅದರಲ್ಲಿ ನೀವು ಸಂದರ್ಶನಕ್ಕೆ ಬರಬಹುದೇ ಅಂತ ಕೇಳಿದ್ದರು. ಆ ಇ ಮೇಲ್ ಅನ್ನು ನನ್ನ ಪತ್ನಿಗೆ ತೋರಿಸಿದ್ದೆ, ಆಗ ಅವಳು ಬಹುಶಃ ಅವರು ತಪ್ಪಾಗಿ ಬೇರೆ ವ್ಯಕ್ತಿಗೆ ಕಳಹಿಸಿದ್ದಾರೆ ಅಂತ ಹೇಳಿದ್ದಳು. ಅಲ್ಲದೆ ನನಗೆ ಎಲ್ಲವೂ ವಿಚಿತ್ರವಾಗಿ ಅನ್ನಿಸತೊಡಗಿತ್ತು. ಯಾಕಂದ್ರೆ ನನಗೆ ಆವಾಗ ತರಬೇತಿಯ ಅನುಭವ ಇರಲಿಲ್ಲ ಅಂತ ಗವಾಸ್ಕರ್ ಅವರ ಇಮೇಲ್ ಬಗ್ಗೆ ಗ್ಯಾರಿ ಕಸ್ಟರ್ನ್ ನೆನಪು ಮಾಡಿಕೊಂಡ್ರು.
ಹಾಗೇ ಗ್ಯಾರಿ ಕಸ್ಟರ್ನ್ ಟೀಮ್ ಇಂಡಿಯಾದ ತರಬೇತುದಾರನ ವಿಚಾರದಲ್ಲಿ ಅನಿಲ್ ಕುಂಬ್ಳೆ ಜೊತೆಗಿನ ಸಂವಾದವನ್ನು ಸ್ಮರಿಸಿಕೊಂಡ್ರು. ನಾನು ಟೀಮ್
ಇಂಡಿಯಾದ ಕೋಚ್ ಹುದ್ದೆಯ ಸಂದರ್ಶನಕ್ಕಾಗಿ ಭಾರತಕ್ಕೆ ಆಗಮಿಸಿದ್ದೆ. ಆಗ ನಾನು ಅನಿಲ್ ಕುಂಬ್ಳೆಯವರನ್ನು ನೋಡಿದ್ದೆ. ಅಲ್ಲದೆ ಅನಿಲ್ ಕುಂಬ್ಳೆ ಅವರು ಆಗ ಟೀಮ್ ಇಂಡಿಯಾದ ನಾಯಕನಾಗಿದ್ದರು. ನನ್ನನ್ನು ನೋಡಿದ್ದಾಗ ಅನಿಲ್ ಕುಂಬ್ಳೆ ಇಲ್ಲಿ ಏನು ಮಾಡುತ್ತಿದ್ದಿರಿ ಅಂತ ಕೇಳಿದ್ದರು. ಅದಕ್ಕೆ ನಾನು ಹೇಳಿದ್ದೆ. ನಾನು ನಿನ್ನ ಕೋಚ್ ಆಗಲು ಸಂದರ್ಶನಕ್ಕೆ ಬಂದಿದ್ದೇನೆ ಅಂತ. ಆಗ ನಾವಿಬ್ಬರು ತುಂಬಾನೇ ನಕ್ಕಿದ್ದೇವೆ ಎಂಬುದನ್ನು ಸಹ ಗ್ಯಾರಿ ಕಸ್ಟನ್ ಹೇಳಿಕೊಂಡ್ರು.
ಇನ್ನು ರವಿಶಾಸ್ತ್ರಿ ಜೊತೆಗಿನ ಸಂವಾದ ಬಗ್ಗೆಯೂ ಗ್ಯಾರಿ ಕಸ್ಟರ್ನ್ ಇದೇ ವೇಳೆ ಪ್ರಸ್ತಾಪ ಮಾಡಿದ್ದಾರೆ. ಬಿಸಿಸಿಐನ ಬೋರ್ಡ್ ಮೀಟಿಂಗ್‍ನಲ್ಲಿ ನಾನು ಭಾಗಿಯಾಗಿದ್ದೆ. ಅಲ್ಲಿನ ವಾತಾವರಣವೂ ಗಂಭೀರವಾಗಿತ್ತು. ಬಿಸಿಸಿಐ ಕಾರ್ಯದರ್ಶಿ ಅವರು ನನಗೆ ಪ್ರಶ್ನೆಯೊಂದನ್ನು ಕೇಳಿದ್ದರು. ಮಿಸ್ಟರ್
ಕಸ್ಟರ್ನ್, ಟೀಮ್ ಇಂಡಿಯಾ ಕ್ರಿಕೆಟ್‍ನ ಭವಿಷ್ಯದ ಬಗ್ಗೆ ಏನು ಹೇಳಲು ಬಯಸುವಿರಿ ಅಂತ. ಅದಕ್ಕೆ ನಾನು ಅಂದೆ ಗೊತ್ತಿಲ್ಲ. ನಾನು ಏನು ತಯಾರಿ ಮಾಡಿಕೊಂಡಿಲ್ಲ. ನನಗೆ ತಯಾರಿ ಮಾಡಿಕೊಳ್ಳಲು ಯಾರು ಏನನ್ನು ಹೇಳಿಲ್ಲ. ನಾನು ಹಾಗೇ ಬಂದಿದ್ದೇನೆ ಅಂತ ಹೇಳಿದ್ದೆ ಎನ್ನುತ್ತಾರೆ ಗ್ಯಾರಿ ಕಸ್ಟರ್ನ್
ಇದೇ ಸಭೆಯಲ್ಲಿ ರವಿಶಾಸ್ತ್ರಿ ಕೂಡ ಇದ್ದರು. ಆಗ ರವಿಶಾಸ್ತ್ರಿಯವರಿಂದ ಒಂದು ಪ್ರಶ್ನೆ ಕೇಳಿ ಬಂತು. ಗ್ಯಾರಿ, ದಕ್ಷಿಣ ಆಫ್ರಿಕಾ ತಂಡ ಭಾರತವನ್ನು ಸೋಲಿಸಲು ಏನು ತಂತ್ರ ಮಾಡುತ್ತದೆ ಎಂದು ರವಿಶಾಸ್ತ್ರಿ ನನ್ನಲ್ಲಿ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ನಾನು ಉತ್ತರಿಸಬಲ್ಲೇ. ಆದ್ರೆ ನಾನು ತಂತ್ರಗಳನ್ನು ಹೇಳಲಿಲ್ಲ. ಬದಲಾಗಿ ಎರಡು ಮೂರು ನಿಮಿಷಗಳ ಮಾತನಾಡಿದ್ದೆ ಒಟ್ಟು ಏಳು ನಿಮಿಷಗಳ ಸಂದರ್ಶನದಲ್ಲಿ ಗ್ಯಾರಿ ಕಸ್ಟರ್ನ್ ಟೀಮ್ ಇಂಡಿಯಾದ ಕೋಚ್ ಆಗಿ ನೇಮಕಗೊಂಡಿದ್ದೆ ಎಂದು ಗ್ಯಾರಿ ಕಸ್ಟರ್ನ್ ಹೇಳಿದ್ರು.
ಸಂದರ್ಶನ ಮುಗಿದ ನಂತರ ಬಿಸಿಸಿಐ ಕಾರ್ಯದರ್ಶಿ ನನ್ನ ಒಪ್ಪಂದದ ಪತ್ರಗಳನ್ನು ನೀಡಿದ್ದರು. ಒಪ್ಪಂದ ಪತ್ರ ಕೈಗೆ ಸಿಗುತ್ತಿದ್ದಂತೆ ಪತ್ರದ ಮೊದಲ ಪುಟವನ್ನು ಓದಲು ಶುರು ಮಾಡಿದ್ದೆ. ಅಲ್ಲಿ ನನ್ನ ಹೆಸರನ್ನು ಹುಡಕುತ್ತಿದ್ದೆ. ಆದ್ರೆ ಅಲ್ಲಿ ನನ್ನ ಹೆಸರು ಇರಲಿಲ್ಲ. ಬದಲಾಗಿ ಹಿಂದಿನ ಕೋಚ್ ಗ್ರೆಗ್ ಚಾಪೆಲ್ ಹೆಸರಿತ್ತು. ಆಗ ನಾನು ಕಾರ್ಯದರ್ಶಿಗೆ ಹೀಗೆ ಹೇಳಿದ್ದೆ. ಸರ್, ನನಗೆ ನೀವು ಹಳೆಯ ಒಪ್ಪಂದ ಪತ್ರವನ್ನು ನೀಡಿದ್ದೀರಿ ಅಂತ. ಆಗ ನನ್ನ ಕೈಯಿಂದ ಒಪ್ಪಂದ ಪತ್ರವನ್ನು ತೆಗೆದುಕೊಂಡು ನೋಡಿದ್ರು. ಹಾಗೇ ಪೆನ್ನಿನಲ್ಲಿ ಚಾಪೆಲ್ ಹೆಸರನ್ನು ಅಳಿಸಿ ಹಾಕಿ ನನ್ನ ಹೆಸರನ್ನು ಅಲ್ಲಿ ನಮೂದಿಸಿದ್ರು ಅಂತ ನಗುತ್ತಲೇ ಗ್ಯಾರಿ ಕಸ್ಟರ್ನ್ ತಾನು ಟೀಮ್ ಇಂಡಿಯಾದ ಕೋಚ್ ಹೇಗೆ ಆದೆ ಎಂಬುದನ್ನು ಸ್ವಾರಸ್ಯಕರವಾಗಿ ಹೇಳಿಕೊಂಡಿದ್ದಾರೆ.








