ಟಿ-ಟ್ವೆಂಟಿ ವಿಶ್ವಕಪ್ ಸಂಘಟಿಸುವುದು ಕಷ್ಟವೋ ಕಷ್ಟ..
2020ರ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಸಂಘಟಿಸುವುದು ತುಂಬಾನೇ ಕಷ್ಟ ಹಾಗೂ ಅಸಾಧ್ಯ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯಸ್ಥ ಎರ್ಲ್ ಎಡಿಂಗ್ಸನ್ ಹೇಳಿದ್ದಾರೆ. ಕೊರೋನಾ ವೈರಸ್ ನಿಂದ ಇಡೀ ವಿಶ್ವವೇ ನಲುಗಿ ಹೋಗಿದೆ. ಅಧಿಕಾರಿಗಳು ಟೂರ್ನಿಯನ್ನು ನಡೆಸಲು ನಾನಾ ರೀತಿಯ ಅವಕಾಶಗಳ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಆದ್ರೂ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ನಡೆಸಲು ಗ್ರೀನ್ ಸಿಗ್ನಲ್ ಸಿಗೋದು ಕಷ್ಟ ಎಂಬ
ಅಭಿಪ್ರಾಯವನ್ನು ಎರ್ಲ್ ಎಡಿಂಗ್ಸನ್ ವ್ಯಕ್ತಪಡಿಸಿದ್ದಾರೆ.
ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ನಡೆಸಲು ಸಾಧ್ಯವಿಲ್ಲ ಅಂತ ರದ್ದುಗೊಳಿಸಲಾಗಿಲ್ಲ. ಹಾಗೇ ಮೂಂದೂಡಲೂ ಇಲ್ಲ. ಟೂರ್ನಿಯನ್ನು ಸಂಘಟಿಸಬೇಕು ಅಂತ ಎಲ್ಲರೂ ಪ್ರಯತ್ನ ಪಡುತ್ತಿದ್ದಾರೆ. 16 ತಂಡಗಳು ಆಸ್ಟ್ರೇಲಿಯಾದಲ್ಲಿ ಆಡಬೇಕು. ಆದ್ರೆ ಕೆಲವು ದೇಶಗಳಲ್ಲಿ ಪ್ರಯಾಣದ ನಿರ್ಬಂದಗಳಿವೆ. ಹಾಗೇ ಕೊವಿಡ್-19 ವೈರಸ್ನಿಂದ ಒದ್ದಾಡುತ್ತಿವೆ. ಹೀಗಾಗಿ ಟೂರ್ನಿಯನ್ನು ಈ ವರ್ಷ ನಡೆಸುವುದು ಕಷ್ಟ ಎಂದು ಅವರು ಹೇಳಿದ್ದಾರೆ.
ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ ಈಗಾಗಲೇ ನಿಗದಿಯಾದಂತೆ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ನಡೆಯಬೇಕಿತ್ತು. ಟೂರ್ನಿಯನ್ನು ಸಂಘಟಿಸಲು ಐಸಿಸಿ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿವೆ. ಈಗಾಗಲೇ ಐಸಿಸಿ ಎರಡು ಬಾರಿ ಸಭೆ ನಡೆಸಿದ್ರೂ ಯಾವ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಇದೀಗ ಜುಲೈನಲ್ಲಿ ಮೂರನೇ ಬಾರಿ ಸಭೆ ಸೇರಲಿದ್ದು, ಆ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ.
ಒಟ್ಟಿನಲ್ಲಿ ವರ್ಷದ ಪ್ರತಿಷ್ಠಿತ ಕ್ರಿಕೆಟ್ ಟೂರ್ನಿಯಾಗಿರುವ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಆಯೋಜಿಸಲು ಆಸ್ಟ್ರೇಲಿಯಾದ ಪ್ರಧಾನಿ ಆಶಾಭಾವನೆ ವ್ಯಕ್ತಪಡಿಸಿದ್ದರು. ಕ್ರೀಡಾಂಗಣದಲ್ಲಿ ಕಡಿಮೆ ಸಂಖ್ಯೆಯ ಪ್ರೇಕ್ಷಕರಿಗೆ ಅವಕಾಶ ನೀಡಿ ಟೂರ್ನಿಯನ್ನು ಆಯೋಜಿಸಬಹುದು ಎಂದು ಹೇಳಿದ್ದರು. ಮತ್ತೊಂದೆಡೆ ಪ್ರೇಕ್ಷಕರಿಲ್ಲದೆ ವಿಶ್ವಕಪ್ ಟೂರ್ನಿಯನ್ನು ಸಂಘಟಿಸಲು ಐಸಿಸಿಯೂ ಚಿಂತನೆ ನಡೆಸಿದೆ. ಈ ಮಧ್ಯೆ ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥರಾದ ಎರ್ಲ್ ಎಡಿಂಗ್ಸನ್ ಅವರು ಟಿ-ಟ್ವೆಂಟಿ ಟೂರ್ನಿಯನ್ನು ಸಂಘಟಿಸುವುದು ಕಷ್ಟ ಎಂಬ ಹೇಳಿಕೆ ನೀಡಿದ್ದಾರೆ. ಒಟ್ಟಾರೆ, ಟೂರ್ನಿಯನ್ನು ಸಂಘಟಿಸಲು ಐಸಿಸಿ, ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಆಸ್ಟ್ರೇಲಿಯಾ ಸರ್ಕಾರದ ನಡುವೆಯೇ ಸಾಕಷ್ಟು ಗೊಂದಲಗಳಿವೆ.








