ಮೈಸೂರು: ನಂಜನಗೂಡಿನಲ್ಲಿ ದೊಡ್ಡ ಜಾತ್ರೆ ವೈಭವ ಕಂಡು ಜನರು ಪುಳಕಿತರಾಗಿದ್ದಾರೆ.
ನಂಜನಗೂಡು ನಂಜುಂಡೇಶ್ವರನ ಸನ್ನಿಧಿಯಲ್ಲಿ ರಥೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ನೀತಿ ಸಂಹಿತೆ ಇರುವ ಹಿನ್ನೆಲೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಆಡಳಿತದ ವತಿಯಿಂದ ಬೆಳಗ್ಗೆ 6 ರಿಂದ 6:40ರೊಳಗೆ ಪಂಚಮಹಾ ರಥೋತ್ಸವ ನಡೆಯಿತು. ದೇವಾಲಯದ ಪ್ರಧಾನ ಅರ್ಚಕ ನೀಲಕಂಠ ದೀಕ್ಷಿತ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದವು.
ರಥ ಬೀದಿಯಲ್ಲಿ ಸಾಗಿದ ಗಣಪತಿ, ಶ್ರೀಕಂಠೇಶ್ವರ ಸ್ವಾಮಿ, ಪಾರ್ವತಿ ಅಮ್ಮ, ಸುಬ್ರಹ್ಮಣ್ಯ ಹಾಗೂ ಚಂಡಿಕೇಶ್ವರ ಸ್ವಾಮಿ ರಥಗಳು ಸಾಗಿದವು. ನೂರಾರು ಟನ್ ತೂಕದ ಬೃಹತ್ ರಥದಲ್ಲಿ ನಂಜುಂಡೇಶ್ವರ ತೆರಳಿದ. ರಥವನ್ನು ಬಣ್ಣ ಬಣ್ಣದ ಬಾವುಟ, ಬಂಟಿಂಗ್ಸ್ ಗಳಿಂದ ಅಲಂಕಾರ ಮಾಡಲಾಗಿತ್ತು. ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸಿದ್ದರು. ಜಾತ್ರೆಯ ಹಿನ್ನೆಲೆಯಲ್ಲಿ ದೇವಾಲಯದ ಸುತ್ತಮುತ್ತ, ಮೊಗಶಾಲೆಯಲ್ಲಿ ಜನಸ್ತೋಮವೇ ಬೀಡು ಬಿಟ್ಟಿತ್ತು. ಹೆಚ್ಚಿನ ಜನರು ಆಗಮಿಸಿದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.








