ನಾನು ಶಾಸಕನಾಗಿ 30 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಬಳ್ಳಾರಿ ಜಿಲ್ಲೆಯಲ್ಲಿ ಕೂಡ ನಾನು ಕೆಲಸ ಮಾಡಿದ್ದೇನೆ. ಕೂಡ್ಲಿಗಿ ಕ್ಷೇತ್ರದಲ್ಲಿ ಕೂಡಾ ನಾನು ಶಾಸಕನಾಗಿ ಕೆಲಸ ಮಾಡಿದ್ದೇನೆ ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಗೋಪಾಲಕೃಷ್ಣ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೊಟ್ಟ ಮಾತನ್ನು ಕ್ಷೇತ್ರದಲ್ಲಿ ಉಳಿಸಿಕೊಂಡಿದ್ದೇನೆ. ವೈಯಕ್ತಿಕವಾಗಿ ನಾನು ರಾಜೀನಾಮೆ ನೀಡಿದ್ದು, ಅದು ಅಂಗೀಕಾರವಾಗಿದೆ. ಕೆಲವು ನೋವುಗಳಿದ್ದು ಅವುಗಳನ್ನು ವರಿಷ್ಠರ ಮುಂದೆ ಹೇಳಿದ್ದೇನೆ. ಈಗ ಮೊಳಕಾಲ್ಮೂರು ಕ್ಷೇತ್ರಕ್ಕೆ ಬಂದಿದ್ದೇನೆ. ಇಲ್ಲಿಯ ಜನರು ಈ ಕ್ಷೇತ್ರದಲ್ಲಿ ನಿಮ್ಮ ಅವಶ್ಯಕತೆ ಇದೆ ಎಂದು ಹೇಳುತ್ತಿದ್ದಾರೆ. ಹೀಗಾಗಿಯೇ ನಾನು ಇಲ್ಲಿಗೆ ಬರುತ್ತಿದ್ದೇನೆ ಎಂದು ಹೇಳಿದ್ದಾರೆ.
ಬೇರೆ ಕ್ಷೇತ್ರಗಳಂತೆ ನಮ್ಮ ಕ್ಷೇತ್ರ ಅಭಿವೃದ್ಧಿ ಮಾಡಬೇಕು ಎಂದು ಹೇಳುತ್ತಿದ್ದಾರೆ. ಆದರೆ, ಮರಳಿ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ. ಕ್ಷೇತ್ರದ ದೃಷ್ಠಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಹೋಗಬೇಕು ಎಂದುಕೊಂಡಿರುವೆ. ಹೈಕಮಾಂಡ್ ನಾಯಕರು ಅವಕಾಶ ಕೊಟ್ಟರೇ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಟಿಕೆಟ್ ನೀಡಿ ಅವಕಾಶ ಮಾಡಿ ಕೊಟ್ಟರೆ ಸ್ಪರ್ಧೆ ಮಾಡುವೆ. ಕಾಂಗ್ರೆಸ್ ಪಕ್ಷದಲ್ಲಿ ಇರುವ ಎಲ್ಲರೂ ಕೂಡಾ ನನ್ನ ಸ್ನೇಹಿತರು. ಕೂಡ್ಲಿಗಿ, ಮೊಳಕಾಲ್ಮೂರು ಕ್ಷೇತ್ರದಲ್ಲಿ ಅನುಕೂಲ ಆಗುತ್ತದೆ ಎಂದು ಮನವಿ ಮಾಡುತ್ತಿದ್ದರು ಎಂದು ಹೇಳಿದ್ದಾರೆ.
ಎರಡನೇ ಪಟ್ಟಿ ಬಿಡುಗಡೆ ಆಗುವ ವೇಳೆ ನನಗೂ ಟಿಕೆಟ್ ಸಿಗುವ ಸಾಧ್ಯತೆ ಇದೆ. ಗೋಪಾಲಕೃಷ್ಣ ಬೇಕು ಎಂದು ಕೆಲ ನಾಯಕರು ಇದ್ದಾರೆ. ನಾಳೆ ಅಥವಾ ನಾಡಿದ್ದು ಪಕ್ಷಕ್ಕೆ ನಾನು ಸೇರ್ಪಡೆ ಆಗುತ್ತೇನೆ. ಅನಿವಾರ್ಯತೆಯಿಂದ ನಾನು ಬೇರೆ ಕ್ಷೇತ್ರಕ್ಕೆ ಹೋಗಿರುವೆ. ನಾನು ಹುಟ್ಟಿದ ಊರು ಮೊಳಕಾಲ್ಮೂರು. ಗೋ ಬ್ಯಾಕ್ ಗೋಪಾಲಕೃಷ್ಣ ಅನ್ನುವ ನೈತಿಕತೆ ಯಾರಿಗೂ ಇಲ್ಲ ಎದು ಆಕ್ರೋಶ ವ್ಯಕ್ತಪಡಿಸಿದ್ದಾರೆ.








