ನಾನು ಮಾನಸಿಕವಾಗಿ ಕೋಲಾರದಿಂದ ಸ್ಪರ್ಧೆ ಮಾಡಲು ಮುಂದಾಗಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಅವರು, ಆದರೆ, ನಾನು ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಹೈಕಮಾಂಡ್ ಎಲ್ಲಿಯೇ ಸ್ಪರ್ಧೆ ಮಾಡಲು ಸೂಚಿಸಿದರೂ ನಾನು ಮಾತ್ರ ಸ್ಪರ್ಧಿಸಲು ಸಿದ್ಧ ಎಂದು ಹೇಳಿದ್ದಾರೆ.
ಸಂಸತ್ ನಲ್ಲಿ ರಾಹುಲ್ ಗಾಂಧಿ ಅನರ್ಹತೆ ವಿಚಾರವಾಗಿ ಮಾತನಾಡಿದ ಅವರು, ಆತುರಾತುರವಾಗಿ ಸಂಸದ ಸ್ಥಾನ ಅನರ್ಹತೆ ಮಾಡಿದ್ದು ಯಾಕೆ? ದೇಶದಲ್ಲಿ ಈ ರೀತಿಯ ಭಾಷಣ ಯಾರೂ ಮಾಡಿಲ್ಲವಾ? ಅವರೆಲ್ಲ ಅನರ್ಹರಾಗಿದ್ದಾರಾ? ಎಂದು ಪ್ರಶ್ನಿಸಿರುವ ಅವರು, ಈ 40 ಪರ್ಸೆಂಟ್ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲವಾಗಿದೆ. ಇಂತಹ ಸರ್ಕಾರ ತೊಲಗಿಸಲು ನಾವು ಹೋರಾಟ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೋದಿ ಅವರಿಗೂ ಅದಾನಿಗೂ ಸಂಭಂದ ಇದೆ ಎಂದು ರಾಹುಲ್ ಹೇಳಿದ್ದು ತಪ್ಪಾ? ರಾಹುಲ್ ಪಾದಯಾತ್ರೆಯಿಂದ ಅಮಿತ್ ಷಾಗೆ, ಮೋದಿಗೆ ಭಯ ಬಂದಿದೆ. ಹೀಗಾಗಿ ರಾಹುಲ್ ರನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ಮಾಡಿದ್ದಾರೆ. ಅವರು ಯಾಕೆ ರಾಹುಲ್ ಗಾಂಧಿ ಒಬ್ಬರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುವುದೇ ತಿಳಿಯುತ್ತಿಲ್ಲ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ನೆಹರು ಅವರು ಜೈಲುವಾಸ ಅನುಭವಿಸಿದ್ದಾರೆ. ದೇಶಕ್ಕಾಗಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹುತಾತ್ಮರಾಗಿದ್ದಾರೆ. ಸೋನಿಯಾ ಗಾಂಧಿ ತ್ಯಾಗ ಮಾಡಿದ್ದಾರೆ. ಅದಕ್ಕಾಗಿ ನಾವು ಇಲ್ಲಿಂದ ಹೋರಾಟ ಆರಂಭ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.








